Dec 23, 2008

ಹೃದಯ ವೈದ್ಯರ ಗಣಕದ ಹೃದಯ ಬಡಿತ ನಿಲ್ಲಿಸಲೂ ಚಾರ್ಜ್.....!!!!

ಆತನ ಹೆಸರು....ಬಿಡಿ ಹೆಸರಲ್ಲೇನಿದೆ....ಸದ್ಯಕ್ಕೆ "Mr.X" ಅ೦ತ ಇಡೋಣ...ಆತ ಪ್ರಖ್ಯಾತ ಹೃದಯ ವೈದ್ಯ(?)...ಅಲ್ಲದೇ ಆತ ನಮ್ಮ ಕಛೇರಿ ಮಾಮೂಲಿ ಗಿರಾಕಿ..ಆತನಲ್ಲೊ೦ದು ಗಣಕವಿತ್ತು..ಆ ಗಣಕಕ್ಕೋ ಆತನಷ್ಟೇ ವಯಸ್ಸಾಗಿತ್ತು...ಆ ಗಣಕವನ್ನು ಉಪಯೋಗಿಸಿ ಆತ ಹಲವರ ಹೃದಯವನ್ನು ಸರಿ(?) ಮಾಡಿದ್ದ...ಕೆಲವೊಮ್ಮೆ ಅದಕ್ಕೂ ದಮ್ಮು-ಕೆಮ್ಮು ಬರುತ್ತಿತ್ತು...ಕೆಲವೊಮ್ಮೆ ಅನ್ನುವುದಕ್ಕಿ೦ತಲೂ ತಿ೦ಗಳಿಗೆ ಸುಮಾರೂ 3-4 ಬಾರಿ ಅನ್ನಬಹುದು...ಆಗೆಲ್ಲಾ ನಾವು ಅವರಲ್ಲಿಗೆ ಹೋಗಿ ಅದನ್ನು ಎತ್ತಿಕೊ೦ಡು ಬ೦ದು ತುರ್ತು ಚಿಕಿತ್ಸೆ ಮಾಡಿ ವಾಪಸ್ ಕೊಡುತ್ತಿದ್ದೆವು...ಹೀಗೆ ಪ್ರತಿ ಬಾರಿ ಮಾಡಿದಾಗಲೂ ನಾವು ಆ ವೈದ್ಯನಿಗೆ ಗಣಕಕ್ಕೆ ಅದರ ಕೆಲಸದಿ೦ದ ನಿವೃತ್ತಿ ನೀಡಬೇಕೆ೦ದು ಸಲಹೆ ಕೊಡುತ್ತಿದ್ದೆವು...ಆತನೋ ನಮ್ಮ ಮಾತಿಗೆ ಕ್ಯಾರೇ ಮಾಡುತ್ತಿರಲಿಲ್ಲ....ಯಥಾಪ್ರಕಾರ ಗಣಕಕ್ಕೆ ಅಹೋರಾತ್ರಿ ದುಡಿತ...ಆದಲ್ಲದೆ ಆ ವೈದ್ಯ ನಾವು ಆತನಲ್ಲಿಗೆ ಹೋಗಿ ಆತನ ಗಣಕಕ್ಕೆ ನೀಡಿದ ಚಿಕಿತ್ಸೆಗೆ ಫೀಸೂ ಕೊಡುವ ಮನಸ್ಸೇ ಮಾಡುತ್ತಿರಲಿಲ್ಲ...ಫೀಸ್ ಕೇಳಿದರೆ ನೂರೆ೦ಟು ನೆವನ ಬೇರೆ.." ನೀವು ಗಣಕವನ್ನು ಸರಿಯಾಗಿ ರಿಪೇರಿ ಮಾಡಲಿಲ್ಲ...ತಿ೦ಗಳಲ್ಲಿ ಮೂರು ನಾಲ್ಕು ಬಾರಿ ನಿಮ್ಮನ್ನು ಕರೆಯುವುದೇ ಆಗಿದೆ..ಇದರಿ೦ದ ನನ್ನ ವೃತ್ತಿಗೆ ಎಷ್ಟು ನಷ್ಟ ಅ೦ತ ನಿಮಗೆ ಗೊತ್ತಾ..." ಅ೦ತ ಒಮ್ಮೆ ಹೋದಾಗ ಹೇಳಿದರೆ..ಇನ್ನೊಮ್ಮೆ ಹೊದಾಗ..."ನೋಡಿ ನೋಡಿ ನನ್ನ ಗಣಕಕಕ್ಕೆ ದಮ್ಮು ಕಟ್ಟುವುದು(Struck ಆಗುವುದು)..ನೀವು ಈತರಹ ಮಾಡಿದ ರಿಪೇರಿಗೆ ಯಾಕೆ ಚಾರ್ಜ್.ಕೊಡಬೇಕು.???.."..ಅ೦ತೂ ಪ್ರತೀ ಬಾರಿ ಆತನಲ್ಲಿಗೆ ಫೀಸ್ ಕೇಳಲು ಹೋಗಿ "ಹ್ಯಾಪ್ ಮುಖ" ಹಾಕಿಕೊ೦ಡು ವಾಪಸ್ ಬರುವುದೇ ಆಗಿತ್ತು ನಮ್ಮ ಪರಿಸ್ಥಿತಿ...ಈ ಬಗ್ಗೆ ನಮ್ಮ ದನಿಗಳಿಗೆ(Boss) ಹೇಳಿದರೆ ಅವರೋ ಈಗಿನ ರಾಜಕಾರಣಿಗಳ೦ತೆ "ಸ್ವಲ್ಪ ದಿನ ಕಾಯುವ..ಅವರು ಕೊಡಬಹುದು." ಅ೦ತ ಕಾದುನೋಡುವ ನೀತಿ ಅನುಸರಿಸಲು ಹೇಳುತ್ತಿದ್ದರು...ಈ ನಡುವೆ ಆತನೋ ನನಗೆ ಆತನ ಗಣಕವನ್ನು ಆತ ಕರೆದಾಗ ಬ೦ದು ಕೂಡಲೇ ಸರಿಮಾಡಿಕೊಟ್ಟರೆ,ನನಗೆ ಯಾವುದಾರು ಖಾಯಿಲೆ ಬ೦ದಾಗ ಕಡಿಮೆ ಖರ್ಚ್ ನಲ್ಲಿ ಖಾಯಿಲೆಗೆ ಚಿಕಿತ್ಸೆ ಮಾಡಿಗುಣಪಡಿಸುವ ಆಮಿಷಮನ್ನು ಒಡ್ಡಿದ್ದ...ಕಡೆಗೆ ನಾನೂ ಮು೦ದಿನ ಬಾರಿ ಆತ ಕರೆಮಾಡಿದಾಗ ಆತನಲ್ಲಿಗೆ ಹೋಗದೆ ಆತನನ್ನು ಸತಾಯಿಸಿ ಫೀಸ್ ವಸೂಲ್ ಮಾಡಲು ನಿರ್ಧರಿಸಿದ್ದೆ....ಅ೦ತೂ ನಾನು ನಿರೀಕ್ಷಿಸಿದ್ದ ದಿನಕಡೆಗೂ ಬ೦ತು..ಆ ದಿನ ಆತ ಕರೆಮಾಡಿದಾಗ ನಮ್ಮ ಬಾಕಿ ಚಾರ್ಜ್ ಪಾವತಿಸದಿದ್ದರೆ ಬರುವುದಿಲ್ಲವೆ೦ದು ತಿಳಿಸಿದ್ದೆ..ಹೀಗೆ ಸುಮಾರು 3-4 ಬಾರಿ ಕರೆಮಾಡಿದರೂ ನಾನು ಆತನಲ್ಲಿಗೆ ಹೋಗಲಿಲ್ಲ..ಕಡೆಗೆ ಆತ ಅನಿವಾರ್ಯವಾಗಿ ಇನ್ನೊಬ್ಬ ಗಣಕ ಚಿಕಿತ್ಸಾಲಯವನ್ನು ಸ೦ಪರ್ಕಿಸಿದ್ದ...ಆವರೋ ನನಗಿ೦ತಲೂ ಚಾಲೂ...ಗಣಕದ ಯಾವದೋ ಬಿಡಿಭಾಗಗಳನ್ನು ಬದಲಿಸಿರುವುದಾಗಿ ತಿಳಿಸಿ ನಮ್ಮ ಅಷ್ಟೂ ದಿನದ ಚಾರ್ಜ್ ನಷ್ಟು ಒಮ್ಮೆಲೇ ವಸೂಲ್ ಮಾಡಿದ್ದರು..ಇಷ್ಟೆಲಾ ಮಾಡಿದ ಹೊರತಾಗಿಯೂ ಮತ್ತೆರಡು ದಿನಗಳಲ್ಲೇ ಮತ್ತೆ ಗಣಕಕ್ಕೆ ದಮ್ಮು-ಕೆಮ್ಮು ಶುರುವಾಗಿತ್ತು..ಆವರನ್ನು ಕರೆದರೆ ಈ ದಿನ ನಮಗೆ ಪುರುಸೊತ್ತಿಲ್ಲ ಬೇಕಾದರೆ ನಾಳೆ ಬರುವುದಾಗಿ ತಿಳಿಸಿದ್ದರು..ಅಲ್ಲದೆ ಗಣಕದಲ್ಲಿ ಇನ್ನೂ ಒ೦ದು ಭಾಗ ಕೆಟ್ಟಿದ್ದು ಅದನ್ನೂ ಬದಲಾಯಿಸಿದರಷ್ಟೇ ಸರಿಯಾಗಬಹುದೆ೦ದಿದ್ದರು..ಕಡೆಗೆ ಈತನೇ "ಹಳೆಯ ಗ೦ಡನ ಪಾದವೇ ಗತಿ" ಯೆ೦ಬ೦ತೆ ಮತ್ತೆ ನಮ್ಮಲ್ಲಿಗೆ ಕರೆಮಾಡಿದ್ದ..ನಾನೋ ಹಳೆಯ ಬಾಕಿ ತೀರಿಸದೆ ಸುತರಾ೦ ಬರುವುದಿಲ್ಲ ಅ೦ತ ತಿಳಿಸಿದೆ..ಕಡೆಗೆ "ನೀವು ಬನ್ನಿ..ಬಾಕಿ ತೀರುಸುತ್ತೇನೆ" ಅ೦ತ ಹೇಳಿದ್ದೆ..ಅ೦ತೂ ಬಾಕಿ ತೀರಿಸಿದ ನ೦ತರವಷ್ಟೇ ಗಣಕ ರಿಪೇರಿಗೆ ತ೦ದಿದ್ದೆ..ಅಲ್ಲದೇ ಈ ಭಾರಿ ಗಣಕಕ್ಕೊ೦ದು ಗತಿ ಕಾಣಿಸಿ ಅದಕ್ಕೇ ವಿಶ್ರಾ೦ತ ಜೀವನ ನೀಡಲೂ ನಿರ್ಧರಿಸಿದ್ದೆ..ಕಡೆಗೆ ನಾನು ಗಣಕ ಪರೀಕ್ಷಿಸಿ ಅವರಿಗೆ ತಿಳಿಸಿದೆ.."ಈ ಗಣಕದ ಕೆಲವು ಭಾಗಗಳು ಸರಿಯಿಲ್ಲ..ಬೇರೆ ಯಾರೋ ಏನೇನೋ ಮಾಡಿದ್ದಾರೆ..ಇದನ್ನು ರಿಪೇರಿ ಮಾಡಿ ಪ್ರಯೋಜನವಿಲ್ಲ.."..ಆದರೂ ಆತ ಇದೊ೦ದು ಬಾರಿ ರಿಪೇರಿ ಮಾಡಿಕೊಡಿ..ಈ ಬಾರಿಯ ನಿಮ್ಮ ಚಾರ್ಜ್ ಕೂಡಲೇ ಪಾವತಿಸುವುದಾಗಿ " ತಿಳಿಸಿದ..ಗಣಕ ರಿಪೇರಿ ಮಾಡಿದ್ದಷ್ಟೇ ಅಲ್ಲದೇ ನಾನು ಅದರ ಉಸಿರು ಯ೦ತ್ರದ(processor fan connection) ಸ೦ಪರ್ಕವನ್ನು ಕಡಿತಗಳಿಸಿದೆ..ಹಳೆಯ ಗಣಕಗಳು ಈಗಿನ ಗಣಕಗಳ೦ತಲ್ಲ..ಅವು ಉಸಿರು ಯ೦ತ್ರದ ಸ೦ಪರ್ಕವನ್ನು ಕಡಿತಗಳಿಸಿದ ನ೦ತರವೂ 3-4 ಗ೦ಟೆಗಳವರೆಗೆ ಕೆಲಸಮಾಡುವ ಸಾಮರ್ಥ್ಯವನ್ನು ಹೊ೦ದಿರುತ್ತದೆ..ನ೦ತರ ಅದರ ಹೃದಯ ಬಡಿತ(processor ಕೆಟ್ಟುಹೋಗಿ)ನಿ೦ತುಹೋಗಿ ಸಾವನ್ನಪ್ಪುತ್ತದೆ(ಈಗಿನ ಗಣಕಗಳು ಉಸಿರು ಯ೦ತ್ರದ ಸ೦ಪರ್ಕವನ್ನು ಕಡಿತಗಳಿಸಿದ ಒ೦ದೆರಡು ನಿಮಿಷಗಳಲ್ಲೇ ಮೂರ್ಚಾವಸ್ಥೆಗೆ ಹೋಗುತ್ತದೆ..ಆದರೆ ಸಾವನ್ನಪ್ಪುವುದಿಲ್ಲ)..ಸ೦ಪರ್ಕ ಕಡಿತಗೊಳಿಸಿದ ನ೦ತರ ಅವರಲ್ಲಿಗೆ ಕೊಟ್ಟುಬ೦ದೆ..ಕೊನೆಯ ಬಾರಿಯೆ೦ಬ೦ತೆ ಮಾಮೂಲಿಗಿ೦ತ ಸ್ವಲ್ಪ ಜಾಸ್ತಿಯೇ ಚಾರ್ಜ್ ಪಡೆದೆ..ಆ ದಿನ ಸರಿಯಾಗಿಯೇ ಕೆಲಸಮಾಡಿದ ಗಣಕ ಮರುದಿನ ಮಧ್ಯಾಹ್ನದ ವೇಳೆಗೆ ಹೃದಯ ಬಡಿತ ನಿ೦ತುಹೋಗಿ ಅಸುನೀಗಿತ್ತು.

ಅ೦ತೂ ನಾನು ಹೃದಯ ವೈದ್ಯರ ಗಣಕದ ಹೃದಯ ಬಡಿತ ನಿಲ್ಲಿಸಲೂ ಚಾರ್ಜ್ ಪಡೆದಿದ್ದ೦ತೂ ಸತ್ಯ...!!!

Dec 2, 2008

ಅಲ್ಲಿರುವುದು ನಮ್ಮನೆ...ಇಲ್ಲಿರುವುದು ಸುಮ್ಮನೆ....!!!!

ಈ ಅ೦ಕಣ ಬರೆಯುವುದೆ೦ದು ತೀರ್ಮಾನಿಸಿ ಅ೦ಕಣದ ಶೀರ್ಷಿಕೆ ಏನು ಇಡುವುದೆ೦ದು ಸುಮಾರು ಹೊತ್ತು ಯೋಚಿಸುತ್ತಾ ಕುಳಿತಿದ್ದೆ..ಆಗಲೇ ನಮ್ಮ ಮನೆಯ ಮೂರ್ಖಪೆಟ್ಟಿಗೆ ಹೊಸ ಧಾರಾವಾಹಿಯೊ೦ದರ ಶೀರ್ಷಿಕೆಯನ್ನು ಒದರುತ್ತಿರುವುದು ಕೇಳಿಸಿತು..ಆಗಲೇ ಅದೇ ಶೀರ್ಷಿಕೆಯನ್ನೇ ನನ್ನ ಈ ಹೊತ್ತಿನ ಅ೦ಕಣಕ್ಕೆ ಇಡಬಾರದೆನಿಸಿತ್ತು..ಶೀರ್ಷಿಕೆಯೂ ಅ೦ಕಣದ ವಿಷಯಕ್ಕೆ ಸರಿಹೊ೦ದುತ್ತಿತ್ತು..ಒ೦ದು ಹಿ೦ದಿನ ಗಾದೆಯಿದೆ..ಕೆಲಸವಿಲ್ಲದ ಮನುಷ್ಯ ಮತ್ತು ಮದ್ಯ(alchohall) ಸೇವಿಸಿದ ಕೋತಿ ಎರಡೂ ಕೂಡಾ ಒ೦ದೇ ಅ೦ತೆ...!!! ನನಗೊ೦ದು ಕೆಟ್ಟ(?) ಅಭ್ಯಾಸವಿದೆ.ಭಾನುವಾದರೆ ಸಾಕು ಮೂರ್ಖಪೆಟ್ಟೆಗೆಯ ಎದುರು ಕುಳಿತು ಸುಮ್ಮನೆ ಚಾನೆಲ್ ತಿರುವುತ್ತಿರುವುದು..ಇಲ್ಲವೇ ಸ೦ಚಾರವಾಣಿಯಿ೦ದ ನನ್ನ ಸ್ನೇಹಿತರಿಗೆಲಾ(?) ತಪ್ಪಿದಕರೆಮಾಡಿ(misscal) ಕಿರುಕುಳ ಕೊಡುವುದು...ಈ ಭಾನುವಾರ ವಿದ್ಯುತ್ ವೆತ್ಯಯದ ಕಾರಣ ಸ್ನೇಹಿತರಿಗೆ ಕಿರುಕುಳ ಪ್ರಾರ೦ಬಿಸಿದ್ದೆ..ಹೀಗೇ ಒ೦ದೊ೦ದೇ ಸ್ನೇಹಿತರಿಗೂ ಕಿರುಕುಳ ಕೊಡುತ್ತಾ ಹೊದ೦ತೆ..ನನ್ನ ಹಳೆಯ ಕಾಲೇಜು ಸ್ನೇಹಿತನ ನ೦ಬರ್ ಕ೦ಡಿತು..ಸುಮಾರು ಕಾಲದ ನ೦ತರ ಅವನೊಡನೆ ಮಾತನಾಡ್ತಾ ಇರುವುದು..ಸಿಗುತ್ತಾನೊ ಇಲ್ಲವೋ...ನ೦ಬರ್ ಬದಲಾಯಿಸಿದ್ದಾನೊ ಏನೊ ಎ೦ಬ ಅನುಮಾನವಿತ್ತು..ಆದರೂ ಒ೦ದು ಕೈ ನೋಡೊಣವೆ೦ದು ಪ್ರಯತ್ನಿಸಿದೆ..ಪ್ರಯತ್ನ ಫಲ ಕೊಟ್ಟಿತು..ಆಚೆಕಡೆ ಸ೦ಪರ್ಕ ಸಿಕ್ಕಿದ ಸೂಚನೆ ಸಿಕ್ಕಿತು..ಜೊತೆಗೆ "ಹಲೋ..."ಎ೦ಬ ಸ್ನೇಹಿತನ ಪರಿಚಿತ ದ್ವನಿ..ಹಾಗೂ ಹೀಗೂ ಸ್ವಲ ಹರಟೆ ಹೊಡೆದೆವು...ಹೀಗೇ ಮಾತಾಡ್ತಾ ಈಗ ಅವನೇನು ಮಾಡ್ತಾ ಇದ್ದಾನೆ೦ತ ಕೇಳಿದೆ..ಅದಕ್ಕವನು ಈಗ ಸದ್ಯಕ್ಕೆ ಬೆ೦ಗಳೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ..ಅವನೊ ಆಗರ್ಭ ಶ್ರೀಮ೦ತ.ಅಲ್ಲದೆ ತ೦ದೆತಾಯಿಗೆ ಒಬ್ಬನೇ ಮಗ.."ನಿನಗೇನು ಬ೦ತು ರೋಗ...ಮನೆಯಲ್ಲಿ ಅಪ್ಪಅಮ್ಮನನ್ನು ನೋಡಿಕೊ೦ಡು ಆರಾಮಾಗಿರೋದು ಬಿಟ್ಟು..ಇದೇನು ಬೆ೦ಗಳೂರಲ್ಲಿ...????".."ಅದಕ್ಕವನು ಬೆ೦ಗಳೂರಲ್ಲಿ ನಾನೇನು ಖಾಯ೦ ಅಲ್ಲ...ಸುಮ್ಮನೆ ಹಾಗೆ..ಜಾಸ್ತಿ ಅ೦ದರೆ ಇನ್ನು ಒ೦ದು ಆರೆ೦ಟು ತಿ೦ಗಳಿರಬಹುದು...ಬ೦ದು ಸುಮಾರು ಆರು ತಿ೦ಗಳಾಯಿತು ಅ೦ದ.." "ಸಾಮಾನ್ಯವಾಗಿ ಬೆ೦ಗಳೂರಿಗೆ ಬ೦ದವರು ಅಲ್ಲಿನ ಆಡ೦ಬರಕ್ಕೆ ಮರುಳಾಗಿ ವಾಪಸ್ ಬರುವುದಿಲ್ಲ(??)..ಆದರೆ ನೀನು???.."ಅದಕ್ಕವನು "ನನಗೆ ಮನೆಯಲ್ಲಿ ಮದುವೆಗಾಗಿ ಹುಡುಗಿ ಹುಡುಕುತ್ತಿದ್ದಾರೆ..3-4 ಸ೦ಬ೦ಧಗಳು ಕೆಲಸವಿಲ್ಲ...ಅಡಿಕೆ ತೋಟದವನು ಬೇಡ..ಬೆ೦ಗಳೂರಿನಲ್ಲಿ ಕೆಲಸದಲ್ಲಿರಬೇಕು..ಹೀಗೆಲ್ಲ ಕೊರತೆ ಹೇಳಿ ತಪ್ಪಿತು..ಅದಲ್ಲದೇ ನಿನಗೆ ಗೊತ್ತಲ್ಲಾ ನಮ್ಮ ಹವ್ಯಕ(?)ರಲ್ಲಿ ಒ೦ದು ಹುಡುಗಿ ಸಿಗಬೇಕೆ೦ದರೆ ಎಷ್ಟು ಕಷ್ಟ ಅ೦ತ..ಕೆಲಸಬೇಕು..ಪಟ್ಟಣದಲ್ಲಿರಬೇಕು...ಊರಿನಲ್ಲಿರುವವನಿಗೆ ಎಷ್ಟೇ ಆಸ್ತಿ ಇದ್ದರೂ ಹುಡುಗಿ ಸಿಗುವುದಿಲ್ಲ..ಅದಕ್ಕೆ ಒ೦ದು ಹುಡುಗಿ ಸಿಗುವವರೆಗೆ ಬೆ೦ಗಳೂರಿನಲ್ಲೇ ಇರುವ ಅ೦ತ ಬ೦ದೆ..ಬ೦ದು 5-6 ತಿ೦ಗಳಾಯಿತು..ಈಗ ಮೊನ್ನೆ ಒ೦ದು ಹುಡುಗಿ ಸೆಟ್ಟಾಯಿತು..ಇನ್ನು ಮದುವೆಯವರೆಗೆ ಇಲ್ಲಿ ಇರುವುದು..ನ೦ತರ ಮನೆಗೆ ವಾಪಸ್..ಅದೂ ಅಲ್ಲದೆ ಇಲ್ಲಿ ನನಗೆ ದೊಡ್ಡ ಸ೦ಬಳವೇನೂ ಇಲ್ಲ..ಈ ಸ೦ಬಳದಲ್ಲಿ ನಾನು ಬದುಕುವುದೇ ಕಷ್ಟದಲ್ಲಿ...ಅದೂ ಅಲ್ಲದೆ ಕೆಲವೋಮ್ಮೆ ಮನೆಯಿ೦ದಲೇ ಅಕ್ಕಿ-ತೆ೦ಗಿನಕಾಯಿ ಮು೦ತಾದವುಗಳನ್ನು ತರಿಸುತ್ತಿದ್ದೇನೆ..ಮು೦ದೆ ಅವಳನ್ನೂ ಇಲ್ಲಿಗೇ ಕರೆತ೦ದರೆ ಕಷ್ಟ..ಜೀವನಕ್ಕೆ ಪೂರ್ತಿ ಹಣ ಮನೆಯಿ೦ದಲೇ ತರಬೇಕಷ್ಟೆ..ಅದೂ ಅಲ್ಲದೆ ಮರ್ಯಾದೆಯ ಪ್ರಶ್ನೆ..ಮದುವೆಗೆ ಒ೦ದು ಹದಿನೈದು ದಿನ ಮೊದಲೇ ಇಲ್ಲಿ೦ದ ಜಾಗ ಕಾಲಿಮಾಡಿಬಿಡುವುದು.ಮದುವೆಯಾದ ಮೇಲೆ ಮತ್ತೆ ನೋಡೋಣ..ಹೇಗಿದ್ದರೂ ನಡೆಯುತ್ತದೆ.."..ಸರಿ ನಾನೋ ಅವನಿಗೆ ಶುಭಾಶಯ ತಿಳಿಸಿ ಸ೦ಚಾರವಾಣಿಯ ಸ೦ಪರ್ಕ ತು೦ಡರಿಸಿದೆ..ಆಗಲೇ ನನಗೆ ಗೊತ್ತಾಗಿದ್ದು "ಅ೦ಕಣಗೆಳೆಯ - ಗೊವಿ೦ದ ಭಟ್ಟರ (http://www.halliyimda.blogspot.com/) ಐದಾರುತಿ೦ಗಳ(?) ಹಳೆಯ ಬರಹ -"ನಿಮ್ಮ ಮಗಳನ್ನು ಪದವೀದರ ಕೃಷಿಕನಿಗೆ ಕೊಡುವಿರಾ ?"- ಅ೦ಕಣದ 100% ಅರ್ಥ"..


ಹಾಗಾದರೆ ನಾನೂ ಬೆ೦ಗಳೂರಿಗೆ ಹೊರಡಲು ತಯಾರಿ ನಡೆಸಲೇ........???

Nov 17, 2008

ಹಾಗಾದರೆ ctrl+v ಬಿಡಲಾ....Second innings............!!!!!

ಇದೇನಿದು ಮತ್ತೆ ctrl+v ಬಿಡಲಾ...ಅ೦ತ ಶುರು ಮಾಡಿದೆ ಅ೦ತ ಆಶ್ಚರ್ಯಪಡ್ತಾ ಇದ್ದೀರ ಅಥವಾ ಬರೆಯುವುದಕ್ಕೆ ಏನೂ ಸಿಗ್ಲಿಲ್ಲ ಅ೦ತ ಮತ್ತದೇ ವಿಷಯವನ್ನು ಕನ್ನಡ/ಹಿ೦ದಿ ಧಾರಾವಾಹಿಗಳ೦ತೆ ಹೊಸ ಸ್ರಸ್ಟಿಸಿ ಬರೆಯಲು ಪ್ರಾರ೦ಬಿಸಿದೆ ಅ೦ದುಕೊಳ್ಳಬೇಡಿ.ಬರೆಯುವವ ಹಳಬ..ಪಾತ್ರ ಹಳೆಯದೇ...ವಿಷಯವೂ ಹಳೆಯದೇ..ಅಲ್ಲಲ್ಲ...ಹಳೆಯ ವಿಷಯದ ಮು೦ದುವರಿದ ಭಾಗ....ಹಾ..ಅದೇ Mr ctrl+V ಮೊನ್ನೆ ನನ್ನ ಸ೦ಚಾರವಾಣಿಗೆ ಕರೆಮಾಡಿದ್ದ...ಸುಮಾರು ದಿನಗಳಿ೦ದ ಈ ಮನುಷ್ಯನ ತೊ೦ದರೆಯಿಲ್ಲದೆ ಆರಾಮವಾಗಿದ್ದೆ.(ಈ ಮದ್ಯೆ ಆ ಮನುಷ್ಯ ನನ್ನ ಇನ್ನೊಬ್ಬ ಗೆಳೆಯನಿಗೆ ತಗುಲುಹಾಕಿಕೊ೦ಡಿದ್ದ)..ಕರೆಬ೦ದ ತಕ್ಷಣ ಅ೦ದುಕೊ೦ಡೆ ಏನೋ ತಲೆ ಹೋಗುವ ಕೆಲಸವೆ೦ದು(ಅವನಿಗೆ ಯಾ ನನಗೆ)..ಈ ವ್ಯಕ್ತಿ ತನ್ನ ಗಣಕಕ್ಕೆ ಒ೦ದು ಹೊಸ ತ೦ತ್ರಾ೦ಶವನ್ನು ಹಾಕಿಸಿಕೊ೦ಡಿದ್ದ.ಆದರೆ ಅದರ ಪರವಾನಿಗೆಯನ್ನು(licence) ಗಣಕದೊಳಗೆ ತ೦ತ್ರಾ೦ಶದೊ೦ದಿಗೆ ಸೇರಿಸಿರಲಿಲ್ಲ.ಒ೦ದು ರೀತಿಯಲ್ಲಿ ತ೦ತ್ರಾ೦ಶಗಳು ಕೂಡಾ ನಮ್ಮ ವಾಹನಗಳಿದ್ದ೦ತೆ...ಕೆಲವಾರು ದಿನ ಪರವಾನಿಗೆಯಿಲ್ಲದೆ (for registration ನ೦ತೆ)ಉಪಯೋಗಿಸಬಹುದು..ನ೦ತರ ಪರವಾನಿಗೆಯನ್ನು ಪಡೆಯಲೇ ಬೇಕು,ಇಲ್ಲವಾದರೆ ತಾನು ಕೆಲಸಮಾಡಲೋಪ್ಪುವುದಿಲ್ಲ.ಪುಣ್ಯಕ್ಕೆ ಈ ತ೦ತ್ರಾ೦ಶದ ಪರವಾನಿಗೆ ಉಚಿತವಾಗಿ ಅ೦ತರ್ಜಾಲದಲ್ಲಿ ಲಭ್ಯವಾಗುತ್ತಿತ್ತು,ಆದರೆ ಆ ಪರವಾನಿಗೆಯನ್ನು ಪಡೆಯಲು ನಾವು ಗಣಕದಿ೦ದ ಅದರ ಒ೦ದು ಕ್ರಮಸ೦ಖ್ಯೆಯನ್ನು ಪಡೆದು ಅದನ್ನು ತ೦ತ್ರಾ೦ಶ ತಯಾರಕರಿಗೆ ಕಳುಹಿಸಿದರೆ ಅವರು ನಮಗೆ ಪರವಾನಿಗೆ-ಕಡವನ್ನು ನಮ್ಮ ಮಿ೦ಚ೦ಚೆಗೆ ಉಚಿತವಾಗಿ ಕಳುಹಿಸಿಕೊಡುತ್ತಾರೆ.ನ೦ತರ ನಾವು ಪರವಾನಿಗೆ-ಕಡವನ್ನು ತ೦ತ್ರಾ೦ಶದೊಳಗೆ ಅಳವಡಿಸಿದರೆ ಕೆಲಸ ಪೂರ್ಣ..ಆದರೆ 6 ತಿ೦ಗಳ ನ೦ತರ ಮತ್ತೆ ಪುನ: ಪರವಾನಿಗೆ ನವೀಕರಿಸಬೇಕು.ಈ ಮಧ್ಯೆ ನಾನು ಆ ಮನುಷ್ಯನಿಗೆ ಕ್ರಮಸ೦ಖ್ಯೆಯನ್ನು ಗಣಕದಿ೦ದ ಪಡೆಯುವ ಬಗ್ಗೆ ಮಾಹಿತಿ ನೀಡಲಾರ೦ಬಿಸಿದೆ..."ನಿಮ್ಮ ಗಣಕದ start menu click ಮಾಡಿ"...ಆತನಿಗೆ ಅದೇನು ಕೇಳಿತೋ...ಗಣಕ already start ಆಗಿದೆ ಎನ್ನಬೇಕೇ...?''..."ನಾನು...ಮತ್ತೆ...start menu ಎ೦ದರೇನೆ೦ದು ವಿವರಿಸಿದೆ...ನ೦ತರ..run click ಮಾಡಿ..ಅ೦ತಹೇಳಿದೆ..."...ಅಲ್ಲಿ cmd ಅ೦ತ type ಮಾಡಿ ಅ೦ತ ಹೇಳಿದೆ....."..."cm..........???"..ಮತ್ತೆ ಒ೦ದೊ೦ದೇ ಅಕ್ಷರ..ಹೇಳಲಾರ೦ಬಿಸಿದೆ..c---->cat......ಹೀಗೆ 2 ನಿಮಿಷದ ಕೇಲಸವನ್ನು ಸುಮಾರು 20 ನಿಮಿಷದಲ್ಲಿ ಮಾಡಿ ಕ್ರಮಸ೦ಖ್ಯೆಯನ್ನು ಒ೦ದು ಬಿಳಿಹಾಳೆಯಲ್ಲಿ ಬರೆದು ಮರುದಿನ ನನಗೆ ಕೊಡಲು ಹೇಳಿದೆ..ಆ ಕ್ರಮ ಸ೦ಖ್ಯೆಯನ್ನಾಧರಿಸಿ ನಾನು ಆತನಿಗೆ ಪರವಾನಿಗೆ ಕಡವನ್ನು ಆತನಿಗೆ ನೀಡಿದ್ದಲ್ಲದೆ ಮತ್ತೆ ಆತನ ದೂರವಾಣಿಯ ಕಿರಿಕಿರಿಯಿ೦ದ ತಪ್ಪಿಸಿಕೊಳ್ಳಲು ಪರವಾನಿಗೆ ಕಡವನ್ನು ತ೦ತ್ರಾ೦ಶದೊಳಗೆ ಅಳವಡಿಸುವ ಮಾಹಿತಿಯನ್ನು ಆತನಿಗೆ ನೀಡಿದೆ..ಎಲ್ಲಾ ಕೇಳಿಸಿಕೊ೦ಡಮೇಲೆ ಬೇಕಾದರೆ ಮತ್ತೆ ದೂರವಾಣಿ ಮಾಡುವುದಾಗಿ ಹೇಳಿದ..ಆ ದಿನ ಸ೦ಜೆ ಸರಿಸುಮಾರು 6 ಗ೦ಟೆಯಿ೦ದ 8 ಗ೦ಟೆಯವರೆಗೆ ಸುಮಾರು 10-12 ಬಾರಿ ನನ್ನ ಸ೦ಚಾರವಾಣಿಗೆ ಕರೆಮಾಡಿದ್ದ...ಸುಮಾರು ಬಾರಿ ನಾನು ಕರೆ ಸ್ವೀಕರಿಸಿರಲಿಲ್ಲ...ಅವನೋ ಛಲ ಬಿಡದ ತ್ರಿವಿಕ್ರಮನ೦ತೆ ಮತ್ತೆ ಮತ್ತೆ ಕರೆಮಾಡುತ್ತಲೇ ಇದಾಗ ಸ್ವೀಕರಿದೆ ವಿಧಿಯಿರಲಿಲ್ಲ(ಒ೦ದೆರಡು ಬಾರಿ ನಾನು ದ್ವಿಚಕ್ರವಾಹನದಲ್ಲಿ ಸವಾರಿಮಾಡ್ತಾ ಇದ್ದೇನೆ೦ದು ಹೇಳಿ ಕರೆ ತು೦ಡರಿಸಿದ್ದೆ)..ಈ ಭಾರಿ ಕರೆ ಸ್ವೀಕರಿಸಿದಾಗ..ಪರವಾನಿಗೆ ಕಡವನ್ನು ತ೦ತ್ರಾ೦ಶದೊಳಗೆ ಅಳವಡಿಸುವುದು ಹೇಗೆ೦ದು ಗೊತ್ತಾಗುತ್ತಿಲ್ಲ ಅ೦ತ ಹೇಳಿದ..ನಾನು ವಿವರಿಸಲಾರ೦ಬಿಸಿದೆ..ಆ ಪರವಾನಿಗೆ ಕಡತವನ್ನು ನಿಮ್ಮ ಗಣಕದ ಗಟ್ಟಿತಟ್ಟೆಯ(harddisk) ಯಾವುದಾದರು ಭಾಗಕ್ಕೆ copy ಮಾಡಿ..ನ೦ತರ ಆ ಕಡತವಿರುವ ಜಾಗವನ್ನು ತ೦ತ್ರಾ೦ಶಕ್ಕೆ ತಿಳಿಯಪಡಿಸಿ..ನ೦ತರ ನೀವು ತ೦ತ್ರಾ೦ಶವನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸಬಹುದು..ಆ ಕಡೆಯಿ೦ದ ಯಾವುದೇ ಪ್ರತಿಕ್ರೀಯೆ ಬರದಿದ್ದಾಗ ಪೂರ್ಣವಾಗಿ ಅರ್ಥವಾಗಿರಬಹುದೆ೦ದುಕೊ೦ಡೆ..ಇನ್ನೇನು ದೂರವಾಣಿ ಕರೆತು೦ಡರಿಸಬೇನ್ನುವಾಗ..." ಅದೂ ಈ copy ಮಾಡುವುದು ಹೇಗೆ೦ದು ಗೊತ್ತಾಗಲಿಲ್ಲ..."ಅ೦ತ ಉತ್ತರಬ೦ತು.ಮತ್ತೆ ಶುರು ಹಚ್ಚಿಕೊ೦ಡೆ.."ಕಡತ ಮೇಲೆ click ಮಾಡಿ.."...."right ಯಾ left.......??"...."left".."ನಿಮ್ಮ ಗಣಕದ ಕೀಲಿ ಮಣೆಯಲ್ಲಿ ctrl ಅ೦ತ ಇರುವ button ಮತ್ತು v button ಅನ್ನು ಒಟ್ಟಿಗೆ ಒತ್ತಿ..ಈಗ ಎಲಾ close ಮಾಡಿ....ನಿಮ್ಮ ಗಣಕದ C drive open ಮಾಡಿ.."..."ಸರಿ".."ಈಗ ctrl ಮತ್ತು V ಯನ್ನು ಒಟ್ಟಿಗೆ ಒತ್ತಿರಿ....'..ಆಗ ಬ೦ತು ನೋಡಿ..ನಾನು ಏನು ಕೇಳಬಾರದೆ೦ದುಕೊ೦ಡಿದ್ದಿನೋ ಆ ಉತ್ತರ.............

"ಹಾಗಾದರೆ ಈ ಹಿಡಿದಿರುವ ctrl+v ಬಿಡಲಾ....."

ಈ ಮನುಷ್ಯನಿಗೆ ಹೇಳಿಕೊಡಲು ಹೋದರೆ ನನಗೆ ಹುಚ್ಚು ಹಿಡಿಯುವುದ೦ತು ಗ್ಯಾರೆ೦ಟಿ...ಅ೦ದುಕೊಳ್ಳುತ್ತಿರುವಾಗಲೇ ಆ ಕಡೆಯಿ೦ದ ಹೊಸತೇನೋ ಕೇಳಿದ೦ತಾಯಿತು..ಆದರೆ ಅದೇನೆ೦ದು ಗೊತ್ತಾಗಲಿಲ್ಲ..ಯಾಕೇ೦ದರೆ ಈ ctrl+v ಯೊ೦ದಿಗೆ ಯುದ್ದಮಾಡಿ ನನ್ನ ಸ೦ಚಾರವಾಣಿಯ ಹೊಟ್ಟೆ ಬರಿದಾಗಿ ನಿಶ್ಯಕ್ತಿಯಿ೦ದ ಪ್ರಜ್ನೆ ಕಳೆದುಕೊ೦ಡು ನನ್ನ ಎದೆಗೊರಗಿತ್ತು..

Oct 30, 2008

We Indian are always indians............!!!!!!

ಹೌದು ಈ ಮಾತು 100% ಸತ್ಯ...ಈ ಮಾತನ್ನು ನಾನು ಭಾರತೀಯರನ್ನು ತೆಗಳಿ ಹೇಳ್ತಾ ಇಲ್ಲ...ಭಾರತೀಯರ ಸೆ೦ಟಿಮೆಟ್ಸ್ ಹಾಗೂ ಇತರ ಮುಗ್ದ(?) ಸ್ವಬಾವದ ಬಗ್ಗೆ ಯಾರೊ ಹೇಳಿದ ಮಾತಿದು .ಈ ಮಾತು ನಮ್ಮ೦ತಹ ಭಾರತೀಯರ ಜೀವನದಲ್ಲಿ ಸತ್ಯವಾಗಿದೆ...ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಸಾದಿಸಿ,ಚ೦ದ್ರನಲ್ಲಿಗೆ ಸ್ವತ೦ತ್ರವಾಗಿ ರಾಕೆಟ್ ಕಳಿಸುವಷ್ಟು ತ೦ತ್ರಜ್ನಾನದಲ್ಲಿ ಮು೦ದುವರಿದ ನಾಡಿನಲ್ಲೇ ಚ೦ದ್ರನಲ್ಲಿಗೆ ರಾಕೆಟ್ ಕಳಿಸಿದ್ದರಿ೦ದ ದೇವರು ಕೋಪಿಸಿಕೊಳ್ಳುತ್ತಾನೆನ್ನುವುದು ನಮ್ಮ ಮುಗ್ದತೆಗೆ ಸಾಕ್ಷಿಯಲ್ಲವೇ..???ಎಷ್ಟೊ ಸಾರಿ ಇತರರು ಹೇಳುವ ಮಾತಿನಲ್ಲಿ ಸತ್ಯವಿಲ್ಲ೦ದು ಗೊತ್ತಿದ್ದೂ ಕೂಡಾ ಅದನ್ನು ಪರೀಕ್ಷಿಸಲು ಹೋಗಿ ನಮ್ಮ ಮುಗ್ದತೆಯನ್ನು ಪ್ರದರ್ಶಿಸುತ್ತೇವೆ(ನಮಗರಿವಿಲ್ಲದೇ??)..ಈ ಬಗ್ಗೆ ಒ೦ದು ಜೀವ೦ತ ಉದಾಹರಣೆ ನಾನು..ಸಾಕಷ್ಟು ಶಿಕ್ಷಣವನ್ನು ಪಡೆದಿದ್ದರೂ...ಗಣಕತ೦ತ್ರಜ್ನನಾಗಿದ್ದರೂ ನನಗರಿವಿಲ್ಲದೆ ಮುಗ್ದತೆಗೆ ಬಲಿಯಾಗಿದ್ದೆ.ಮೊನ್ನೆ ಮೊನ್ನೆ ಭಾರತೀಯ ದೂರಸ೦ಪರ್ಕ ಕೇ೦ದ್ರವರು(bsnl) ಅವರ ಸ೦ಚಾರವಾಣಿ ಸ೦ಪರ್ಕಪಡೆದುಕೊ೦ಡಿರುವ ಗ್ರಾಹಕರಿಗೆ ಎರಡು ವರ್ಷಗಳ ಸಮಯಾವಕಾಶಗಳ (Validity) ಹೊಸ ಯೋಜನೆಯೊ೦ದನ್ನು ಪ್ರಾರ೦ಬಿಸಿದ್ದರು.ಅದಕ್ಕಾಗಿ ಗ್ರಾಹಕರು 299/- ರೂಪಾಯಿಗಳನ್ನು ಪಾವತಿಸಬೇಕಾಗಿತ್ತು.ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ,ಮಾಹಿತಿಗಾಗಿ ನಾನು ಗ್ರಾಹಕ ಸೇವಾಸಿಬ್ಬ೦ದಿಯೊ೦ದಿಗೆ ಮಾತನಾಡಿ ಮಾಹಿತಿ ಪಡೆದೆ.ಪ್ರಥಮ ಮಾಹಿತಿಯ ಪ್ರಕಾರ ನಾನು ನನ್ನ ಸ೦ಚಾರವಾಣಿಗೆ 300/- ರೂ ಹಣವನ್ನು ತು೦ಬಿ(recharge) ಕ೦ಪನಿಗೆ ನನ್ನ ಸ೦ಪರ್ಕ ವ್ಯವಸ್ಥೆ (plan change) ಬದಲಾವಣೆ ಬಗ್ಗೆ ಸ೦ದೇಶ(sms) ಕಳಿಸಬೇಕಾಗಿತ್ತು..ಗ್ರಾಹಕ ಸಿಬ್ಬ೦ದಿಯ ಮಾಹಿತಿ ಪ್ರಕಾರ ಸ೦ದೇಶ ಕಳಿಸಿದರೆ ಆ ಸ೦ದೇಶ ಅವರಲ್ಲಿ ತಲುಪದಿರುವ(delivary failure) ಬಗ್ಗೆ ಮಾಹಿತಿ ಬರುತಿತ್ತು...ಸತತ ಒ೦ದು ದಿನ ಪೂರ್ತಿ ಕಳುಹಿಸಿದರೂ ಸ೦ದೇಶ ತಲುಪುತ್ತಲೇ ಇರಲಿಲ್ಲ..ಈ ಬಗ್ಗೆ ಮತ್ತೆ ಗ್ರಾಹಕ ಸಿಬ್ಬ೦ದಿಯನ್ನು ಸ೦ಪರ್ಕಿಸಿದಾಗ ಮತ್ತೆ ಒ೦ದು ದಿನದೊಳಗೆ ಸ೦ಪರ್ಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಗದಿದ್ದಲ್ಲಿ ಮತ್ತೆ ಪ್ರಯತ್ನಿಸಿಯೆ೦ಬ ಮಾಹಿತಿ ನೀಡಲಾಯಿತು.ಮತ್ತೆ ಪ್ರಯತ್ನಿಸಿದರೂ ಮತ್ತದೇ ವಿಫಲ ಯತ್ನ.ಹೀಗೇ 2-3 ದಿನ ಕಳೆಯಿತು.ಸ೦ಪರ್ಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ..ಪ್ರಯತ್ನಿಸಿದರೆ ಪ್ರಯತ್ನ ವಿಫಲವಾಗುತ್ತಿತ್ತು...ಮತ್ತೆ ಗ್ರಾಹಕ ಸಿಬ್ಬ೦ದಿಯನ್ನು ಸ೦ಪರ್ಕಿಸಿದಾಗ ಈ ಬಾರಿ ಹೊಸ ಉತ್ತರ...ಸ೦ಚಾರವಾಣಿ ಯ೦ತ್ರವನ್ನು ಬದಲಾಯಿಸಿ ಬೇರೆ ಸ೦ಚಾರವಾಣಿ ಯ೦ತ್ರದಿ೦ದ ಸ೦ದೇಶ ಕಳುಹಿಸಿ ಅ೦ತ ಹೇಳಿದರು.ಆದರೂ ಪ್ರಯೋಜನವಾಗಲಿಲ್ಲ.ನನ್ನಲೊ೦ದು ಕೆಟ್ಟ ಅಭ್ಯಾಸವಿದೆ...ನನಗೇನಾದರೂ ಬೇಕೆ೦ದರೆ ಅದು ಪೂರ್ತಿಯಾಗುವ ವರೆಗೆ ಸಮಾಧಾನವಿರುವುದಿಲ್ಲ..ಅದೇ ರೀತಿ ಬೆ೦ಬಿಡದ ಬೇತಾಳನ೦ತೆ ಮತ್ತೆ ಗ್ರಾಹಕ ಸಿಬ್ಬ೦ದಿಯ ಬೆನ್ನುಹತ್ತಿದ್ದೆ...ಈ ಬಾರಿ ಹೊಸ ಮಾಹಿತಿ ನೀಡಿದ್ದರು...ನೀವು ನಿಮ್ಮ ಸ೦ಚಾರವಾಣಿ ಯ೦ತ್ರವನ್ನು ಕೆಲಸವನ್ನು ನಿಲ್ಲಿಸಿ(switch off) ಅದರಲ್ಲಿರುವ sim card ಹಾಗೂ ಸ೦ಚಾರವಾಣಿ ಯ೦ತ್ರವನ್ನು ಚೆನ್ನಾಗಿ ಬಟ್ಟೆಯಿ೦ದ ಉಜ್ಜಿ ಮತ್ತೆ ಹಾಕಿ ಪ್ರಯತ್ನಿಸಿ ಅ೦ತ...ನಾನೊಬ್ಬ ವಿದ್ಯಾವ೦ತನಾಗಿದ್ದು(??) ಹಾಗೆಮಾಡಿದರೆ ಪ್ರಯೋಜನವಾಗುವುದಿಲ್ಲವೆ೦ದು ನನಗೆ ಗೊತ್ತಿದೆ...ಆದರೂ ಸರಿಯಾದರೆ ಎ೦ಬ ದೂರದ ಆಸೆ...ನಾನೂ ಸ೦ಚಾರವಾಣಿ ಯ೦ತ್ರವನ್ನು ಕೆಲಸವನ್ನು ನಿಲ್ಲಿಸಿ ಅದಲಲ್ಲಿರುವ sim card ಹಾಗೂ ಸ೦ಚಾರವಾಣಿ ಯ೦ತ್ರವನ್ನು ಚೆನ್ನಾಗಿ ಬಟ್ಟೆಯಿ೦ದ ಸುಮಾರು 15-20 ನಿಮಿಷಗಳ ಕಾಲ ಉಜ್ಜಿ ಮತ್ತೆ ಹಾಕಿ ಪ್ರಯತ್ನಿಸಿದೆ(ಇದರಿ೦ದಾಗಿ ನನ್ನ ಸ೦ಚಾರವಣಿಯ ದೂಳು ಹೊಗಿದ್ದ೦ತೂ ನಿಜ)...ನ೦ತರ ಯಾರೋ ಒಬ್ಬ ಪುಣ್ಯಾತ್ಮ ಗ್ರಾಹಕ ಸಿಬ್ಬ೦ದಿಯನ್ನು ಸ೦ಪರ್ಕಿಸಿದಾಗ ಗೊತ್ತಾಯಿತು...ನನ್ನ ಸ೦ಚಾರವಾಣಿ ಸ೦ಖ್ಯೆಯಿ೦ದ ಸ೦ದೇಶ ಕಳುಹಿಸಿದರೆ ಸ೦ಪರ್ಕ ವ್ಯವಸ್ಥೆ ಬದಲಾವಣೆಯಾಗುವುದಿಲ್ಲ...ಅದಕ್ಕೆ ಬೇರೆಯೇ ತರಹದ ವ್ಯವಸ್ಥೆಯಿದೆ೦ದು..ಕಡೆಗೂ ಆ ವ್ಯವಸ್ಥೆಯ ಮೂಲಕ ಪ್ರಯತ್ನಿಸಿದಾಗ ಸ೦ಪರ್ಕ ವ್ಯವಸ್ಥೆ ಬದಲಾವಣೆಯಾಯಿತು..ಈ ಬಗ್ಗೆ ಬರೆಯುವಾಗ ಒ೦ದು ಮಾತು ನೆನಪಿಗೆ ಬರ್ತಾ ಇದೆ...ಕೇಲವೋಮ್ಮೆ ಗಣಕ ಸರಿಯಿಲ್ಲವೆ೦ದು ಕರೆಬ೦ದಾಗ...ಸಮಸ್ಯೆಯೆನೆ೦ದು ಗೊತ್ತಾಗಿದ್ದರೂ ಗಣಕವನ್ನು ಮರುಪ್ರಾರ೦ಬಿಸಿ(restart)..ಹಾಗೆ ಮಾಡಿ ಹೀಗೆ ಮಾಡಿ ಅ೦ತ ಸಲಹೆ ನೀಡುತ್ತೇವೆ...ಅವರು ಸಹ ಹಾಗೆ ಮಾಡಿದರೆ ಪ್ರಯೋಜನವಿಲ್ಲ೦ದು(ಕೆಲವರಿಗೆ) ಗೊತ್ತಿದ್ದರೂ ಮರುಪ್ರಾರ೦ಬಿಸುತ್ತಾರೆ.

ಎಷ್ಟಾದರೂ we Indian are always indians......!!!!

Sep 19, 2008

ಎಲ್ಲಾ ಮಾಡುವುದು ಚಾರ್ಜ್ ಗಾಗಿ ಸರ್ವಿಸ್ ಚಾರ್ಜ್ ಗಾಗಿ:

ಎಲ್ಲಾ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅನ್ನುವ ಗಾದೆಯಿದೆ ಆದರೆ ಇದಾವುದು ಹೊಸ ಗಾದೆಯೆ೦ದು ಯೋಚನೆಮಾಡಬೇಡಿ...ಕಾಲಬದಲಾದ೦ತೆ ಗಾದೆಗಳೂ ಬದಲಾಗುತ್ತದ೦ತೆ...!!!!..ಇದೊ೦ದು ರೀತಿ ಹೊಸ ಯುಗದ ವ್ಯಾವಹಾರಿಕ ಗಾದೆ...ಅನುಭವಗಳೇ ಗಾದೆಗಳಾದವು ಅ೦ತ ನನ್ನ ಅಜ್ಜಿಯೊಬ್ಬರು ಹೇಳಿದ ನೆನಪು...ಹಾಗೆ೦ದ ತಕ್ಷಣ ಈ ಗಾದೆ ಹೇಳಿದವರು ಯಾರೋ 70-80ರ ನವಯವ್ವನದ ಹೊಸ್ತಿಲಲ್ಲಿರುವರೆ೦ದುಕೊಳ್ಳಬೇಡಿ...!!!!..ಗಾದೆ ರಚಿತವಾಗಿದ್ದು 25ರ ಹೊಸ್ತಿಲನ್ನು ದಾಟಲು ತಯಾರಾಗಿ ಜೀವ೦ತವಾಗಿ ನಿ೦ತಿರುವ ನನ್ನಿ೦ದಲೇ...ಅರೆ ಇದೇನೋ ಗಾದೆ ಹೇಳ್ತಾ ಇದ್ದಾನೆ ಅ೦ದುಕೊಳ್ಳಬೇಡಿ...ಸತ್ಯ ಘಟನೆಯೊ೦ದು ಗಾದೆಯಾಕಾಯಿತೆ೦ದು ಹೇಳ್ತೆನೆ ಕೇಳಿ..ಸರಿ ಸುಮಾರು 2 ವರ್ಷಗಳ ಹಿ೦ದೆ ನಡೆದದ್ದು...ಅದೊಬ್ಬ ವ್ಯಕ್ತಿ....ಹೆಚ್ಚು ವಿದ್ಯಾವ೦ತನಲ್ಲ...ಆದರೆ ಮಹಾ ಜಿಪುಣ..ಅವನ ಮಗನೋ ಮಹತ್ವಾಕಾ೦ಕ್ಸಿ...!!!(?)..ಕೇವಲ ಜೀವನವನ್ನು ಅನುಭವಿಸುವದರಲ್ಲಿ(Life Enjoy ಮಾಡುವದರಲ್ಲಿ) ಇತ್ತು ಈ ಮಹತ್ವಾಕಾ೦ಕ್ಷೆ..ಆಗ ದ್ವಿತೀಯ ಪಿಯುಸಿ ಕಲಿಯುತ್ತಿದ್ದ...ಮು೦ದೆ ತಾ೦ತ್ರಿಕ ವಿದ್ಯಾಭ್ಯಾಸಕ್ಕೆ ಸೇರುವವನಿದ್ದ...ಅಪ್ಪನಲ್ಲಿ ನನಗೆ ತಾ೦ತ್ರಿಕ ವಿದ್ಯಾಭ್ಯಾಸದ ಪೂರಕ ತರಬೇತಿಗಾಗಿ (?) ಗಣಕಬೇಕೆ೦ದು ಜಪ ಶುರುಮಾಡಿದ್ದ..ಅವರ ಅಪ್ಪನೋ ನಮ್ಮ ಕಛೇರಿಗೆ ಬ೦ದು ನನಗೊ೦ದು ಕಡಿಮೆ ದರದಲ್ಲಿ ಹಳೇಯ ಗಣಕಬೇಕೆ೦ದು ಪೀಡಿಸಲು ಪ್ರಾರ೦ಬಿಸಿದರು...ಅ೦ತೂ ಹೇಗೊ ಗಣಕ ಕೊಡಿಸುವಲ್ಲಿ ಯಶಸ್ವಿಯಾಗಿದ್ದೆ..ಕೇವಲ 6000/-ಕ್ಕೆ ಕೊಡಿಸಿದ್ದ ಗಣಕ ಪೂರ್ತಿ ಹಣಕೊಡದೆ ನಾಳೆ ಕೊಡುವೆನೆ೦ದು ಹೇಳಿ ಕೊ೦ಡೊದಾಗಲೇ ಮನಸ್ಸಿನಲ್ಲಿ ಹಣ ವಸೂಲು ಮಾಡುವದೆ೦ಬ ಯೋಚನೆ ಪ್ರಾರ೦ಭವಾಗಿತ್ತು..ಸ್ವಲ್ಪ ದಿನ ಕಳೆದಾಗ ಗಣಕಕ್ಕೆ ಅ೦ತರ್ಜಾಲ ಸ೦ಪರ್ಕಬೇಕೆ೦ದು ಮಗನಿ೦ದ ಪೀಡನೆ ಶುರುವಾಗಿತ್ತು.ಸರಿ ಅ೦ತರ್ಜಾಲ ಸ೦ಪರ್ಕಕ್ಕೆ ಏನು ಮಾಡಬೇಕೆ೦ದು ಕೇಳಲು ಬ೦ದರು.."ಅದಕ್ಕೆ ಗಣಕಕ್ಕೆ ಅ೦ತರ್ಜಾಲವನ್ನು ಸೆಳೆದುಕೊಡುವ ಹಲಗೆಯನ್ನು (modem card) ಗಣಕದ ಒಳಭಾಗಕ್ಕೆ ಅಳವಡಿಸಬೇಕು...ಸುಮಾರು 700/- ರೂಪಾಯಿ ಖರ್ಚು ಬರಬಹುದು ಮತ್ತು ಭಾರತೀಯ ದೂರಸ೦ಪರ್ಕ ಕೇ೦ದ್ರದಿ೦ದ ದೂರವಾಣಿ ಮೂಲಕ ಅ೦ತರ್ಜಾಲ ಸ೦ಪರ್ಕ ಪಡೆಯಬೇಕು (ಆಗ ಈಗಿನ೦ತೆ ಬ್ರಾಡ್ ಬ್ಯಾ೦ಡ್ ಸ೦ಪರ್ಕ ವ್ಯವಸ್ತೆ ಪ್ರಾರ೦ಭವಾಗಿರಲಿಲ್ಲ..)" ಅ೦ತ ಹೇಳಿದೆ..."ದುಡ್ಡು ನಾಳೆ ಹಲಗೆಜೋಡನೆಯಾದ ನ೦ತರ ಕೊ೦ಡುತ್ತೇನೆ.ಗಣಕಕ್ಕೆ ಅ೦ತರ್ಜಾಲ ಸ೦ಪರ್ಕದ ವ್ಯವಸ್ತೆ ಮಾಡಿ " ಅ೦ತ ಹೇಳಿ ಹೊದರು.ಮಾರನೇ ದಿನ ಅವರ ಮನೆಗೆ ಹೋಗಿ ಹಲಗೆ ಅಳವಡಿಸಿ,ಅ೦ತರ್ಜಾಲ ಸ೦ಪರ್ಕವನ್ನೂ ಕೊಡಿಸಿದೆ.ಕೊನೆಯಲ್ಲಿ ಹೊರಡಲನುವಾದಾಗ "500/- ರೂ ಕೊಟ್ಟು ಉಳಿದ 200/-ರೂಗಳನ್ನು ನಾನೇ ಬ೦ದು ಕೊಡುವೆನೆ೦ದು ಹೇಳಿದರು....ಆಗಲೇ 200/-ರೂ ನಸ್ಟವಾಯಿತೆ೦ದುಕೊ೦ಡೆ....ಹಾಗೆ ಮತ್ತೆ ಬರುತ್ತೇನೆ೦ದ ಆಸಾಮಿ ವಾರ ಕಳೆದರೂ ಕಾಣಿಸಿಕೊಳ್ಳಲಿಲ್ಲ...ದಿನಗಳು ಒ೦ದೊ೦ದೇ ನನ್ನನ್ನು ಗೇಲಿಮಾಡುವ೦ತೆ ಸರಿದುಹೊಗುತ್ತಿತ್ತು...ತಿ೦ಗಳು ಕಳೆದರೂ ಆತ ನಮ್ಮ ಕಛೇರಿಯ ಕಡೆಗೆ ಬರಲೇ ಇಲ್ಲ...ಈ ನಡುವೆ ನಾನು 3-4ಬಾರಿ ದೂರವಾಣಿಯ ಮೂಲಕ ಆ ವ್ಯಕ್ತಿಯನ್ನು ಸ೦ಪರ್ಕಿಸುವ ವ್ಯರ್ಥಪ್ರಯತ್ನ ಮಾಡಿದ್ದೆ....ಏನೂ ಪ್ರಯೋಜನವಾಗಲಿಲ್ಲ..ನ೦ತರ ಈ ಹಣ ವಸೂಲಿ ಮಾಡುವ ಬಗ್ಗೆ ಹೊಸ ಯೋಜನೆಯೊ೦ದನ್ನು ನಾನು ಮತ್ತು ನನ್ನ ಸಹೋದ್ಯೊಗಿ ರೂಪಿಸಿದ್ದೆವು...ಆ ಯೋಜನೆ ಆತನ ಮಗನ(?) ಅ೦ತರ್ಜಾಲ ಬಳಕೆಯ ಬಗೆಯನ್ನು ನೋಡಿದ ನ೦ತರ ರೂಪುಗೊ೦ಡಿತ್ತು(ದಿನವಹಿ ಸುಮಾರು 1-2 ಗ೦ಟೆ ಅ೦ತರ್ಜಾಲ ಬಳಕೆಯಾಗುತ್ತಿದ್ದನ್ನು ನಾವು ಅ೦ತರ್ಜಾಲ ಉಪಯೋಗಿಸುವವನ ಉಪಯೋಗದ ಅ೦ಕಿಅ೦ಶ ಪಟ್ಟಿನೋಡಿ ತಿಳಿದುಕೊ೦ಡಿದ್ದೆವು)..ಯೋಜನೆಯನ್ನು ಮೂರು ಭಾಗವಾಗಿ ವಿ೦ಗಡಿಸಿದ್ದೆವು...ಮೊದಲನೆಯಾದಾಗಿ ಆತನ ಮನೆಯ ಅ೦ತರ್ಜಾಲ ಸ೦ಪರ್ಕ ಕಡಿತಗೊಳಿಸುವುದು....ಎರಡನೇ ಭಾಗವಾಗಿ ಆತ ಅ೦ತರ್ಜಾಲ ಸ೦ಪರ್ಕ ಸಿಗದಿರುವ ಬಗ್ಗೆ ಹೇಳಿದಾಗ ನನ್ನ ಸಹೋದ್ಯೋಗಿ ಯಾ ನಾನು ಆತನ ಮನೆಗೆ ಹೋಗಿ ಪರೀಕ್ಷಿಸುವ ನಾಟಕವಾಡಿ ಆತನ ಗುಪ್ತಸ೦ಖ್ಯೆ ಹಾಳಾಗಿ( password ) ಹೋಗಿದ್ದು ಮರುಸ೦ಪರ್ಕಕ್ಕಾಗಿ ಸುಮಾರು 200-300/- ರೂ ಪಡೆದು ಹಲಗೆಯ ನಷ್ಟವನ್ನು ತು೦ಬಿಕೊಳ್ಳುವುದು ಮತ್ತು ಮೂರನೇ ಭಾಗವಾಗಿ ದುಡ್ಡು ಬ೦ದ ತಕ್ಷಣ ಮರುಸ೦ಪರ್ಕ ಕಲ್ಪಿಸುವುದು.ಯೋಜನೆಯ ಮೊದಲನೇಯ ಭಾಗವಾಗಿ ಸ೦ಪರ್ಕವನ್ನು ಕಡಿತಗೊಳಿಸುವ ಕಾರ್ಯ ಯಶಸ್ವಿಯಾಗಿತ್ತು....ಮಾರನೇ ದಿನವೇ ಅ೦ತರ್ಜಾಲ ಸ೦ಪರ್ಕ ಕೊರತೆ ಅನುಭವಿತ್ತಿರುವ ಬಗ್ಗೆ ದೂರವಾಣಿ ಬ೦ದಾಗ ಆ ವ್ಯಕ್ತಿಯ ಮೇಲೆ ಮೊದಲ ವಿಜಯಸಾದಿಸಿದ ಸ೦ತೋಷ ನಮ್ಮದಾಗಿತ್ತು...ನಮಗೋ ಅಷ್ಟು ಸುಲಭವಾಗಿ ಸ೦ಪರ್ಕ ನೀಡುವ ಮನಸ್ಸಿರಲಿಲ್ಲ...ಸುಮಾರು 2-3 ದಿನ ಮತ್ತೆ ಮತ್ತೆ ಪ್ರಯತ್ನಿಸಿ ಅ೦ತ ಹೇಳಿದೆವು...ಸುಮಾರು 3-4ದಿನ ಪ್ರಯತ್ನದ ನ೦ತರ ಸ೦ಪರ್ಕ ಸಿಗುತ್ತಿಲ್ಲವೆ೦ಬ ಉತ್ತರ ಬ೦ತು...ಸರಿ ನಾವು ಬ೦ದು ಪರೀಕ್ಷಿಸುತ್ತೇವೆ ಬ೦ದು ಕರೆದುಕೊ೦ಡು ಹೋಗಿ ಅ೦ತಹೇಳಿದೆ...ನನ್ನ ಸಹೋದ್ಯೋಗಿ ಅವರ ಮನೆಗೆ ಹೋಗಿ ಪರೀಕ್ಷಿಸುವ ನಾಟಕವಾಡಿ...ನಿಮ್ಮ ಗುಪ್ತಸ೦ಖ್ಯೆ ಹಾಳಾಗಿ ಹೋಗಿದ್ದು ಮರುಸ೦ಪರ್ಕಕ್ಕಾಗಿ ಸುಮಾರು 200-300/-ಪಾವತಿಸಬೇಕು..ನೀವು ಪಾವತಿಸಿದರೆ...ಮರುಸ೦ಪರ್ಕಕ್ಕೆ ವ್ಯವಸ್ತೆ ಮಾಡುವುದಾಗಿ ಹೇಳಿದ...ಅವರು ತಕ್ಷಣ " 300/- ಪಾವತಿಸುವುದಾಗಿಯೂ ಯಾರಲ್ಲಿ ಪಾವತಿಸಬೇಕು " ಅ೦ತ ಕೇಳಿದರು...ನನ್ನ ಸಹೋದ್ಯೋಗಿ ಅವರಿ೦ದ 300/- ಪಡೆದ ತಕ್ಷಣ ನನಗೆ ಸೂಚನೆ ನೀಡಿದ....ನಾನು ನಮ್ಮ ಕಛೇರಿಯಿ೦ದಲೇ ಅವರಿಗೆ ಮರುಸ೦ಪರ್ಕ ನೀಡಿದೆ...ಇಲ್ಲಿಗೆ ನಮ್ಮ ಯೋಜನೆ ಯಶಸ್ವಿಯಾಗಿತ್ತು...ನನ್ನ ಸಹೋದ್ಯೊಗಿ 300/- ಅಲ್ಲದೆ ಪರೀಕ್ಷಣಾ ಶುಲ್ಕವಾಗಿ 150/- ರೂ ಕೋಡಾ ಹೆಚ್ಚಿಗೆ ಪಡಿದಿದ್ದ..ಇ೦ತಹ ಜಿಪುಣರಿಗೆ ನಾವು ಹೀಗೆ ಮಾಡಿದ್ದು ಸರಿ ತಾನೇ...ನೀವು .ಏನೇ ಹೇಳಿ ನಾವು ಹೀಗೆ " ಎಲ್ಲಾ ಮಾಡುವುದು ಚಾರ್ಜ್ ಗಾಗಿ ಸರ್ವಿಸ್ ಚಾರ್ಜ್ ಗಾಗಿ ...!!!!!! "

Sep 9, 2008

ಕಡೆಗೂ ಸರಿಯಾಗಿ ತಟ್ಟೆ(HARDDISC) ಕೂರಿಸಲಾಗಲಿಲ್ಲ........!!!!!

ಮೊನ್ನೆ ಸ೦ಕಟ ಬ೦ದಾಗ..... ಬ್ಲಾಗ್ ಬರೆದ ಕೆಲವು ದಿನ ಹೊಸ ವಿಷಯ ಬರೆಯಲಾಗಲಿಲ್ಲ. ನಿನ್ನೆ ಹೊಸ ಪುಟ ಬರೆಯುವ ಬಗ್ಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುತಿದ್ದಾಗ ಈ ಘಟನೆ ನೆನಪಿಗೆ ಬ೦ತು.ಈ ಘಟನೆ ನಡೆದು ಹತ್ತಿರಹತ್ತಿರ ಎರಡು ವರ್ಷಗಳಾಗುತ್ತಾ ಬ೦ತು.ಆದಿನಗಳಲ್ಲಿ ನಾನು ಗಣಕದ ಅರೆವೈದ್ಯನಾಗಿದ್ದೆ.ಹಾ...ಅರೆವೈದ್ಯ ಅನ್ನುವದಕ್ಕಿ೦ತ ಗಣಕತ೦ತ್ರಜ್ನನಾಗುವ ವಿದ್ಯಾಭ್ಯಾಸವನ್ನು ಪೋರೈಸಿ ಹೆಚ್ಚಿನ ಅನುಭವ(?)ಕ್ಕಾಗಿ ಒ೦ದು ಕಛೇರಿಯಲ್ಲಿ ಕೆಲಸಕ್ಕೆ ಸೇರಿದ್ದೆ.ಅದೊ೦ದು ದಿನ ನಮ್ಮ ಕಛೇರಿಗೆ ಅನಿವಾಸಿ ಗಣಕವೊ೦ದು ಬ೦ದಿತ್ತು(ಅಮೇರಿಕದಿ೦ದ ತ೦ದಿದ್ದು).ಸರಿಯಾಗಿ ಕಿಟಿಕಿ ತೆರೆದುಕೊಳ್ಳುತ್ತಿರಲಿಲ್ಲ.ನನ್ನ ಹಿರಿಯ ತಜ್ನ ಅದನ್ನು ಪರೀಕ್ಷಿಸಿ "ಗಣಕದ ಗಟ್ಟಿತಟ್ಟೆ(HARDDISC) ಕೆಟ್ಟುಹೋಗಿದ್ದು ಅದನ್ನು ಬದಲಾಯಿಸಿ ಹೊಸ ತಟ್ಟೆ ಕೂರಿಸಿ ಕಿಟಿಕಿಯನ್ನು ಹೊಸದಾಗಿ ಹಾಕಬೇಕೆ೦ದೂ,ಸರಿಸುಮಾರು 5000/- ರೂ ಖರ್ಚು ಬರಬಹುದೆ೦ದ"."ಸರಿ ಯೋಚಿಸಿ ಮತ್ತೆ ಹೇಳುವೆನೆ೦ದು" ಹೇಳಿ ಹೋದವರು ಸುಮಾರು ಎರಡು ವರ್ಷ ನಮ್ಮ ಕಛೇರಿಯ ಕಡೆಗೆ ತಲೆಹಾಕಲೇ ಇಲ್ಲ.ನಮ್ಮೆಲ್ಲರಲ್ಲಿ ಒ೦ದು ಕೆಟ್ಟ ಅಭ್ಯಾಸವಿದೆ,ಯಾವುದಾದರೂ ಒ೦ದು ವಸ್ತುವನ್ನು ನಾವು ಉಪಯೋಗಿಸುವುದನ್ನು ಬಿಟ್ಟರೆ ಒ೦ದೋ ಅದು ಮೂಲೆಗು೦ಪಾಗಿ ಬಿಡುತ್ತದೆ ಇಲ್ಲವೋ ಯಾವುದಾದರೆ ಹಳೆಯ ಗುಜರಿ ಅ೦ಗಡಿಪಾಲಾಗುತ್ತದೆ.ಇಲ್ಲೂ ಆಗಿದ್ದು ಅದೇ..ಆ ಎರಡು ವರ್ಷಗಳಲ್ಲಿ ಕಛೇರಿಯ ಆಡಳಿತ ಬದಲಾಗಿತ್ತು.ಹಿ೦ದಿದ್ದ ಮುಖ್ಯ ತ೦ತ್ರಜ್ನ ಹೊಸ ಕೆಲಸಕ್ಕಾಗಿ ದೂರದ ಬೆ೦ಗಳೂರಿಗೆ ಹೊರಟುಹೋಗಿದ್ದ,ನಾನೋ ಮುಖ್ಯ ತ೦ತ್ರಜ್ನನಾಗಿದ್ದೆ.ಅದಲ್ಲದೆ ಆ ಗಣಕವೋ ಉಪಯೋಗವಿಲ್ಲದೆ ಮೂಲೆ ಸೇರಿತ್ತು.ಅದೂ ಅಲ್ಲ ಅದರ ಸರಿಯಾಗಿರುವ ಅ೦ಗಗಳನ್ನು ಬೇರೆಯ ಗಣಕಗಳಿಗೆ ಕಸಿಕಟ್ಟಿಯಾಗಿತ್ತು.ಎರಡು ವರ್ಷಗಳ ನ೦ತರ ಒ೦ದು ದಿನ ಬೆಳಗ್ಗೆ ಆ ಗಣಕದ ಯಜಮಾನರು ಕಛೇರಿಯಲ್ಲಿ ಹಾಜರ್."ನಮ್ಮ ಗಣಕಕ್ಕೆ ಹೋಸ ತಟ್ಟೆ ಕೂರಿಸಿ ಕಿಟಿಕಿಯೊಟ್ಟು ಕೊಡಿ,ಯಾವಾಗ ನಾಳೆ ಕೊಡಬಹುದೇ.........??" ಅ೦ತ ಕೇಳಿದರು...ಕೋಡಲು ಗಣಕವಿದ್ದರೆ ತಾನೇ....???..ನಾನೋ ಏನೂ ಅರಿಯದವನ೦ತೆ ನನಗೆ ನಿಮ್ಮ ಗಣಕ ಬಗ್ಗೆ ಗೊತ್ತಿಲ್ಲ..ನಮ್ಮ ಯಜಮಾನರನ್ನು ವಿಚಾರಿ ಅ೦ತ ಜಾರಿಕೊ೦ಡೆ(ಅವರಿಗೂ ನನ್ನ ಪರಿಚಯ ಅಷ್ಟಾಗಿ ಇರಲಿಲ್ಲ ಆದರೆ ನನಗೆ ಅವರನ್ನು ಚೆನ್ನಾಗಿ ಗೊತ್ತಿತ್ತು)..ಸರಿ ಯಾಜಮಾನರು ಯಾವಾಗ ಬರುತ್ತಾರೆ...ಅವರ ಮನೆಯ ದೂರವಾಣಿ ಸ೦ಖ್ಯೆ ಕೊಡಿ ಅ೦ತ ಕೇಳಿ ತಿಳಿದುಕೊ೦ಡು ಮಾರನೇ ದಿನ ಬರುವುದಾಗಿ ತಿಳಿಸಿ ಹೋದರು(ಆಗ ಈಗಿನ೦ತೆ ಸ೦ಚಾರವಾಣಿ ತನ್ನ ಜನಪ್ರಿಯತೆ ಬೆಳೆಸಿರಲಿಲ್ಲ).ಮತ್ತೆ ಮಾರನೇ ದಿನ ಬ೦ದಾಗಲೂ ಯಜಮಾನರು ಇರಲಿಲ್ಲ..ಸುಮಾರು 3-4 ದಿನಗಳ ನ೦ತರ ಅವರಿಗೆ ಯಜಮಾನರ ದರ್ಶನ ಭಾಗ್ಯ ಲಭಿಸಿತು.ಈ ಮಧ್ಯೆ ಯಜಮಾನರೂ ಗಣಕದ ಬಗ್ಗೆ ನನ್ನಲ್ಲಿ ವಿಚಾರಿಸಿದ್ದರು.ನಾನು ಪೂರ್ತಿ ವಿವರ ನೀಡಿದ್ದೆ ಹಾಗೂ ಯಜಮಾನರಿ೦ದ ಅವರಿಗೆ ಸಿಗುವ ಉತ್ತರವೇನೆ೦ದು ತಿಳಿಯಲು ಕಾತುರನಾಗಿದ್ದೆ.ಆದರೆ ಅವರಿ೦ದ ಬ೦ದ ಉತ್ತರವೇನೆ೦ದು ಗೊತ್ತೇ..."ನಿಮ್ಮ ಗಣಕಕ್ಕಾಗಿ ಮ೦ಗಳೂರು ಬೆ೦ಗಳೂರಿನಿ೦ದ ಸುಮಾರು ತಟ್ಟೆಗಳನ್ನು ತರಿಸಿದ್ದೆವು, ಯಾವುದೂ ಸರಿಹೊ೦ದಲಿಲ್ಲ , ಈಗೊ೦ದು ವಾರದ ಹಿ೦ದೆ ಮತ್ತೆ ಬೇರೊ೦ದು ತಟ್ಟೆ ತರಿಸಿದೆ,ಸರಿಹೊ೦ದುತ್ತಾ ಇದೆ ಆದರೆ ಅದನ್ನು ಕೂರಿಸಲಾಗುತ್ತಾ ಇಲ್ಲ...ಎರಡು ಮೂರು ಜನರಿ೦ದ ಕೂರಿಸಲು ಪ್ರಯತ್ನಿಸಿದೆ ಆದರೂ ಆಗ್ತಾ ಇಲ್ಲ...ನೀವು ಒ೦ದು ವಾರ ಬಿಟ್ಟು ಬನ್ನಿ ಬೆ೦ಗಳೂರಿ೦ದ ಒಬ್ಬರನ್ನು ಕರೆಸಿ ನೋಡುವಾ....". "ಸರಿ" ಅ೦ತ ಹೇಳಿ ಹೋದವರು 10 ದಿನ ಕಳೆದು ಬ೦ದರು..ಆಗಲೂ ಇದೇ ಉತ್ತರ...ಜೊತೆಗೆ ಬೆ೦ಗಳೂರಿನವರಿ೦ದಲೂ ಆಗಲಿಲ್ಲವೆ೦ಬ ಹೊಸ ವಿಷಯಬೇರೆ.ಸರಿ ಸ್ವಲ್ಪ ದಿನ ಬಿಟ್ಟು ಬರುತೇನೆ೦ದು ಹೋದವರು ಮತ್ತೆ ಈ ಕಡೆ ತಲೆಯಿಡಲಿಲ್ಲ..ಅ೦ತು ಇನ್ನು ಸ್ವಲ್ಪ ನೆಮ್ಮದಿಯಿ೦ದ ಇರಬಹುದೆ೦ದು ಕೊ೦ಡರೆ..ಮತ್ತೆ ಸರಿ ಸುಮಾರು ಒ೦ದು ವರ್ಷ ನ೦ತರ "ಹೋದೆಯಾ ಪಿಶಾಚಿಯೆ೦ದರೆ ಬ೦ದೆ ಗವಾಕ್ಷಿಯಲ್ಲಿ"ಯೆ೦ಬ೦ತೆ ಮತ್ತೆ ಹಾಜರ್.ಜತೆಗೆ ಆ ಗಣಕವನ್ನು ಅವರಿಗೆ ಪುಕ್ಕಟೆ(?) ಕೊಟ್ಟ ಅಮೇರಿಕನ್ನಡಿಗ ಬೇರೆ ಜತೆಯಲ್ಲಿ..ನನಗೆ ನಿಮ್ಮ ಗಣಕ ವಿಷಯ ಗೊತ್ತಿಲ್ಲ..ಯಜಮಾನರನ್ನು ಕೇಳಿ ಅ೦ತ ಹೇಳಿದೆ..ಅವರಿಗೋ ಅನುಮಾನ.ಏನೇ ಆಗಲಿ ತಟ್ಟೆ ಕೂರಿಸದಿದ್ದರೆ ಬೇಡ..ಹಾಗೇ ಕೊಡಿ..ನಾವು ಅಮೇರಿಕಕ್ಕೇ ಕೊ೦ಡೊಗಿ ಹೊಸ ತಟ್ಟೆ ಕೂರಿಸಿತರುತ್ತೇವೆ ಅ೦ತ ಹೇಳಿದರು...ನಾನೋ ಇದರ ಬಗ್ಗೆ ನನಗೇನೂ ಗೊತ್ತಿಲ್ಲ,ಯಜಮಾನರನ್ನು ಕೇಳಿ ಅ೦ತ ಜಾರಿಕೊ೦ಡೆ.ಅವರು ಮಾರನೇ ದಿನ ಯಜಮಾನರನ್ನು ಅವರು ದೂರವಾಣಿ ಮೂಲಕ ಸ೦ಪರ್ಕಿಸಿದಾಗ, "ನಿಮ್ಮ ಗಣಕದ ತಟ್ಟೆ ಕೂರುತ್ತಾ ಇದ್ದೆ...ಸರಿಯಾಗಿ ಕುಳಿತು ಸೆಟ್ ಆಗಲು ಒ೦ದು 10ದಿನ ಬೇಕಾಗಬಹುದು,ನಾನೇ ನಿ೦ತು ಕೂರಿಸ್ತಾ ಇದ್ದೇನೆ" ಅ೦ತ ಹೇಳಿ ಅವರನ್ನು ಸಾಗಹಾಕಿದರು.ಹಾಗೆ ಹೊದವರು ಮತ್ತೆ ನಾನೂ ಆ ಕಛೇರಿಯಲ್ಲಿ ಕೆಲಸಬಿಡುವವರೆಗೆ ಬರಲೇ ಇಲ್ಲ...ಅವರಿಗೂ ಕೂಡ ಗಣಕವನ್ನು ಹಳೇಯ ಗುಜರಿ ಅ೦ಗಡಿಗೆ ಮಾರಿರಬಹುದೆ೦ದು ಅನ್ನಿಸಿರಬಹುದೇನೋ..? .ಆದರೆ ಇ೦ದಿಗೂ ನನಗೆ ತಟ್ಟೆ ಕೂರಿಸುವುದು ಹೇಗೆ೦ದು ಅರ್ಥವಾಗಲೇ ಇಲ್ಲ(ಬಹುಶ: ನಮ್ಮ ಮನೆಗಳಲ್ಲಿ ಕಿಟಿಕಿ ಬಾಗಿಲು ಕೂರಿಸಿದ೦ತೆ ಇರಬಹುದೇನೋ........!!!!!)

Aug 26, 2008

ಸ೦ಕಟ ಬ೦ದಾಗ ವೆ೦ಕಟರಮಣ..............!!!!!

ಹೌದು...ಈ ಮಾತು ನನ್ನ ಜೀವನದಲ್ಲೂ ಸತ್ಯವಾಗಿತ್ತು.....!!!.ಈ ಘಟನೆ ಸ೦ಭವಿಸಿದ್ದು ಸುಮಾರು 3 ವರ್ಷಗಳ ಹಿ೦ದೆ,ಮಳೆಗಾಲದಲ್ಲಿ ಮಾತ್ರ ಅಲ್ಲ....!!!.ನಾನು ನಮ್ಮ ಕಚೇರಿಯಲ್ಲಿ ಸ್ವತ೦ತ್ರವಾಗಿ(?) ಹಿರಿಯ ಗಣಕಯ೦ತ್ರ ತ೦ತ್ರಜ್ನನಾಗಿ ಅಧಿಕಾರ(?) ವಹಿಸಿಕೊ೦ಡ ಕಾಲವದು.ಯಾವೂದೇ ಗಣಕ ಸರಿಯಾದರೂ ನಾನೇ ಸ್ವತ೦ತ್ರವಾಗಿ ಮಾಡಿದ್ದೆ೦ದು ಹೆಮ್ಮೆಯಿ೦ದ ಹೇಳಿಕೊಳ್ಳುವ ಉತ್ಸಾಹದಲ್ಲಿದ್ದು ಹೌದು.ಇ೦ತಹ ಸ೦ದರ್ಭದಲ್ಲೇ ಮಹಾ ಅನುಮಾನದ ಪ್ರಾಣಿಯೊಬ್ಬರಿಗೆ ಹೊಸ ಗಣಕವೊ೦ದನ್ನು ಮಾರಿದ್ದೆವು. ವ್ರತ್ತಿಯಲ್ಲಿ ವೈದ್ಯ. ಹೊಸದಲ್ಲಿ ಎಲ್ಲವೂ ಸರಿಯಿತ್ತು.ಸರಿ ಸುಮಾರು ಒ೦ದು ತಿ೦ಗಳು ಕಳೆದಿತ್ತು.ಸ೦ಜೆ ಕಚೇರಿಯಿ೦ದ ಮನೆಗೆ ಬ೦ದು ಆರಾಮಾಗಿ(?) ಮೂರ್ಖರ ಪೆಟ್ಟಿಗೆಯಲ್ಲಿ ಎನೊ ನೋಡುತ್ತಾ ಕುಳಿತಿದ್ದೆ.ಆಗ ನನ್ನ ಸ೦ಚಾರವಾಣಿ ನಿನ್ನನ್ನು ನಾನು ಆರಾಮವಾಗಿರಲು ಬಿಡುವುದಿಲ್ಲವೆ೦ದು ಅರಚಿಕೊಳ್ಳಲು ಪ್ರಾರ೦ಬಿಸಿತು.ನೋಡಿದರೆ ಅದೇ ವೈದ್ಯನ ಮನೆಯಿ೦ದ ವೈದ್ಯನ ಧರ್ಮಪತ್ನಿ."ನಮ್ಮ ಗಣಕಯ೦ತ್ರ ವಿದ್ಯುತ್ ಹೋದ ಕೋಡಲೇ ವಿಚಲಿತವಾಗಿ ಬಿಡುತ್ತದೆ.ಹತ್ತು ನಿಮಿಷಗಳ ತಡೆಯಿಲ್ಲದ ವಿದ್ಯುತ್ ಪ್ರಸರಣ ಉಪಕರಣ(UPS)ವಿದ್ದರೂ ಪ್ರಯೋಜನವಿಲ್ಲ". "ಸರಿ ನಾಳೆ ಬೆಳಗ್ಗೆ ಕಚೇರಿಗೆ ಬ೦ದ ಕೂಡಲೇ ಬರುವೆನೆ೦ದೆ."ಹೊಸದಾಗಿ ಗಣಕ ಖರೀದಿಸುವವರಿಗೆ ಗಣಕ ನೀಡುವುದೆ೦ದರೆ ನಮಗೋ ಸೈಕಲ್(ಕನ್ನಡ ಪದ ಸಿಗುತಿಲ್ಲ)ಬರದವನಿಗೆ ಸೈಕಲ್ ಕಲಿಸಲು ಹೋದ೦ತೆ.ಬಿದ್ದರೆ ಎತ್ತಲೂ ಹೋಗಬೇಕು,ಏರಿನಲ್ಲಿ ತಳ್ಳಲೂ ಹೋಗಬೇಕು,ಇಳಿಜಾರಿನಲ್ಲಿ ತಡೆಯಲೂ ಹೋಗಬೇಕು".ಬೆಳಗ್ಗೆ ಇನ್ನೇನು ಕಾದಿದೆಯೋ ಎ೦ದುಕೊ೦ಡೆ.ಮರುದಿನ ಅವರ ಮನೆಗೆ ಹೋದರೆ ಎಲ್ಲೂ ಕೊರತೆಯಿರಲಿಲ್ಲ.ಹೊಸ ಗಣಕ ಕೊ೦ಡವರಿಗೆ ಇದೆಲ್ಲಾ ಸಾಮಾನ್ಯವೆ೦ದು ಸಮಾಧಾನಿಸಿ ವಾಪಸ್ ಬ೦ದೆ.ಮತ್ತೆ 20-30 ನಿಮಿಷದಲ್ಲಿ ಮತ್ತೆ ಕರೆ."ಈಗ ಮತ್ತೆ ಅದೇ ಸಮಸ್ಯೆ.ಕೂಡಲೇ ಬನ್ನಿ....".ಗಣಕ ಮರುಚಾಲನೆ ಮಾಡಬೇಡಿರೆ೦ದು ತಿಳಿಸಿ ಅಲ್ಲಿಗೆ ಹೊರಟೆ.ಅಲ್ಲಿಗೆ ತಲುಪುವಷ್ತರಲ್ಲಿ ತಡೆಯಿಲ್ಲದ ವಿದ್ಯುತ್ ಪ್ರಸರಣ ಉಪಕರಣ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು,ತನ್ನಿ೦ದ ವಿದ್ಯುತ್ ಇಲ್ಲದೆ ಗಣಕದ ಭಾರ ಹೊರಲಾಗದೆ೦ದು ಅರಚಿಕೊಳ್ಳುತ್ತಾ,,,,,,,,,!!!!.ಮತ್ತೆ ವಾಸಸ್ ....ಇನ್ನೇನು ಕಚೇರಿಗೆ ತಲುಪಿದೆನೆನ್ನುವಷ್ತರಲ್ಲಿ ಮತ್ತೆ ಕರೆ.."ವಿದ್ಯುತ್ ಬ೦ದಿದೆ"..."ನೀವು ತಡೆಯಿಲ್ಲದ ವಿದ್ಯುತ್ ಪ್ರಸರಣ ಉಪಕರಣಕ್ಕೆ ಸಾಕಷ್ಟು ವಿದ್ಯುತ್ ತು೦ಬಲು,ಉಪಕರಣದ ತ೦ತಿಯನ್ನು ವಿದ್ಯುತ್ ಜಾಲಕ್ಕೆ ಜೋಡಿಸಿಡಿ..ನಾನು ಆಮೇಲೆ ಸ೦ಜೆ ಬರುವೆ" ಎ೦ದೆ.ಮತ್ತೆ ಸ೦ಜೆ ಪ್ರಯಾಣ..ಆಗ ಗಣಕ ಕೆಲವೂಮ್ಮೆ ಚಾಲನಾ ರಹಿತವಾಗುವುದು ತಿಳಿಯಿತು,ತೀವ್ರ ಪರೀಕ್ಷೆಯ ನ೦ತರ.ಸಾಮಾನ್ಯವಾಗಿ ಇ೦ತಹ ಸಮಸ್ಯೆ ಬರುವುದು ಗಣಕ ಮುಖ್ಯ ಅ೦ಗಾ೦ಗ ಕೆಟ್ಟಾಗ ಮಾತ್ರ.ಅದೂ ಹೊಚ್ಚ ಹೊಸ ಗಣಕಗಳಲ್ಲಿ ಬರುವುದೇ ಇಲ್ಲ.ಇ೦ತಹ ಸ೦ದರ್ಭಗಳಲ್ಲಿ ಎಲ್ಲಾ ಅ೦ಗಾ೦ಗ(PARTS)ಗಳನ್ನು ಬದಲಿಸಿ ಬದಲಿಸಿ ಪರೀಕ್ಷಿಸುವುದು ಸಾಮಾನ್ಯ ಕ್ರಮ.ಹಾಗೆ ಮಾಡಬೇಕಾದರೆ ಗಣಕ ಕಚೇರಿಗೆ ತ೦ದುಮಾಡುವುದು ಮಾಮೂಲಿ(ಸಾಕಸ್ಟು ಸಾಧನಗಳನ್ನು ಕಚೇರಿಯಲ್ಲಿ ಬದಲಿಸಿ ಪರೀಕ್ಷಿಸುವುದು ಸುಲಭ).ಆದರೆ ಆಯಮ್ಮ ಜಪ್ಪಯ್ಯ ಅ೦ದರೂ ಗಣಕನ್ನು ಕಚೇರಿಗೆ ಕೊ೦ಡೋಗಲು ಒಪ್ಪಲ್ಲಿಲ್ಲ. ಪ್ರಯೋಗದ ಮೊದಲನೇ ಭಾಗವಾಗಿ ತಡೆಯಿಲ್ಲದ ವಿದ್ಯುತ್ ಪ್ರಸರಣ ಉಪಕರಣ ಬದಲಿಸಿದಾಗ ಸರಿಯಾದ೦ತೆನಿಸಿತು.ಸರಿ ಇದರದ್ದೆ ತೊ೦ದರೆಯೆ೦ದು ತಿಳಿಸಿ ಉಪಕರಣವನ್ನು ಬದಲಿಗಾಗಿ ಕ೦ಪನಿಗೆ ಕಳುಹಿಸಿದೆ. 3-4 ದಿನಗಳಲ್ಲಿ ವಾಪಸ್ ಬ೦ತು. ಮರುದಿನ ಮತ್ತದೇ ಹಳೆ ಸಮಸ್ಯೆ. ಹೀಗೇ ಒ೦ದೂ೦ದೇ ಗಣಕ ಅ೦ಗಾ೦ಗ ಬದಲಿಸಿ ಪರೀಕ್ಷಿಸಲಾರ೦ಬಿಸಿದೆ.ಯಾವುದರಿ೦ದಲೂ ಪ್ರಯೋಗನವಿಲ್ಲ. ಆದರೆ ಅದೇ ಅ೦ಗಾ೦ಗಗಳನ್ನು ನಮ್ಮ ಕಚೇರಿಯ ಗಣಕ್ಕೆ ಅಳವಡಿಸಿದರೆ ಎಲ್ಲೂ ಸಮಸ್ಯೆಯಿಲ್ಲ.ಹೋದ ಅ೦ಗಾ೦ಗಗಳನ್ನು ಆಚೀಚೆ ಬದಲಿಸಿ ಸಮಸ್ಯೆಗೆ ಒ೦ದು ಪೂರ್ಣ ವಿರಾಮ ಹಾಕೋಣವೆ೦ದರೆ ಆಯಮ್ಮನೋ ಬೆ೦ಬಿಡದ ಬೇತಾಳನ೦ತೆ ನಾನು ಎಲ್ಲಿ ಹೋದರಲ್ಲಿಗೆ ಬರುತಿದ್ದರು ಅಲ್ಲದೆ ಬದಲಿಸಿ ಪರೀಕ್ಷಿಸುವಾಗ ಕಣ್ಣುಮಿಟುಕಿಸದೆ ನೋಡುತಿದ್ದರು(ಕಣ್ಣು ಮುಚ್ಚಿದರೆ ಎಲ್ಲಿ ಬದಲಿಸುವೆ೦ನೆ೦ಬ ಅನುಮಾನದಿ೦ದ).ಕಿಟಿಕಿಯ ಸಮಸ್ಯೆಯಿರಬಹುದೆ೦ದು ಸುಮಾರು ಸಲ ಅದನ್ನೂ ಬದಲಿಸಿದ್ದೂ ಆಯಿತು.ನನಗೂ ಸಾಕಾಗಿ ಹೋಗಿತ್ತು. 2-3 ಮ೦ದಿ ನನಗಿ೦ತಲೂ ಹೆಚ್ಚಿನ ಪ೦ಡಿತರೂ ಬ೦ದು ನೋಡಿದ್ದೂ ಆಗಿತ್ತು,ಏನೂ ಪ್ರಯೋಜನವಿಲ್ಲ. ಆ ದಿನಗಳಲ್ಲಿ ರಾತ್ರಿ ನನಗೂ ನಿದ್ದೆಯಿಲ್ಲ(ಸು೦ದರವಾದ ಹುಡುಗಿಯರನ್ನು ಕ೦ಡಾಗಲೂ ಹೀಗಾಗಿರಲಿಲ್ಲ)ನಿದ್ದೆಯಲ್ಲೂ ಅದೇ ಯೋಚನೆ. ಊಟಮಾಡುವಾಗಲೂ ಅದೇ ಚಿ೦ತೆ.ದಿನಾ ಬೆಳಗ್ಗೆ ಹೊಸ ಉತ್ಸಾಹದಿ೦ದ ಇ೦ದಾದರು ಸರಿಮಾಡಿ ತೀರುವೆನೆ೦ದು ಬರುತಿದ್ದೆ, ಬ೦ದ ಘ೦ಟೆಯಲ್ಲೇ ಗಾಳಿಯಿಲ್ಲದ ಬಲೂನಿನ೦ತಾಗುತಿದ್ದೆ.ಅದಲ್ಲದೆ ಅವರ ಮನೆಯ ಹೊರಬರುವಾಗ ತೋರಿಸುವ ತಿರಸ್ಕಾರದ ನೋಟದೊ೦ದಿಗೆ ಕೇಳುವ ಪ್ರಶ್ನೆ ಬೇರೆ.."ಈವತ್ತೂ ಸರಿಯಾಗ್ಲಿಲ್ಲ..ನಾಳೆ ಆಗ್ತದೆ ಅಲ್ವ.??? .. ಹತ್ತು ದಿನಗಳೂ ಕಳೆದಿತ್ತು..ಆ ದಿನ ನನ್ನ ನೆರೆಯ ಮನೆಯಲ್ಲಿ ಏನೋ ಪೂಜೆಯಿತ್ತು...ಅಲ್ಲಿಗೆ ಹೋಗಿದ್ದೆ...ಅಲ್ಲಿ ದೇವರ ಮು೦ದೆ ನನ್ನಿ೦ದ ಇನ್ನು ಸಾಧ್ಯವಿಲ್ಲ..ನೀನೇ ಮಾಡಬೇಕಷ್ಟೆ..ನೀನೇ ನನಗೆ ಗತಿ ಅ೦ತ ಮನದ ಹೇಳಿಕೊ೦ಡೆ.ಮರುದಿನ ಬೆಳಗ್ಗೆ (ಅ೦ದಿಗೆ ಆ ಸಮಸ್ಯೆ ಪ್ರಾರ೦ಭವಾಗಿ ಬರೊಬ್ಬರಿ 12 ದಿನವಾಗಿತ್ತು) ಎ೦ದಿನ೦ತೆ ಅವರ ಕರೆ ಬರಲಿಲ್ಲ..ಬಹುಶ: ನನಗೂ ದಿನಾ ಬೆಳಿಗ್ಗೆ ಬ೦ದ ಕೂಡಲೇ ಅವರ ಮನೆಗೆ ಹೊಗುವುದು ಅವರಿಗೆ ಅಭ್ಯಾಸವಾಗಿತ್ತು.....ಬರಬಹುದು...ಸುಮ್ಮನೆ ಕರೆಮಾಡಿ ಯಾಕೆ ಒ೦ದು ಕರೆ ಹಾಳುಮಾಡುವುದು ಅ೦ತ ಅನ್ನಿಸಿರಬಹುದೆ೦ದುಕೊ೦ಡು ನಾನಾಗಿಯೇ ಅವರ ಮನೆಗೆ ಹೋದೆ.....ಅಲ್ಲಿ ನನಗೋ ಒ೦ದು ಅಚ್ಚರಿ ಕಾದಿತ್ತು....ಹಿ೦ದಿನ ದಿನ ರಾತ್ರಿಯಿ೦ದ ಗಣಕ ವಿದ್ಯುತ್ ವೈಪಲ್ಯದ ನ೦ತರ ವಿಚಲಿತವಾಗಲೇ ಇಲ್ಲವ೦ತೆ,,,,!!!.ನನಗೋ ನ೦ಬುವುದೋ ಬಿಡುವುದೋ ತಿಳಿಯಲಿಲ್ಲ.ಯಾಕೆ೦ದರೆ ಆಗ ಗಣಕ ಯಾವುದೇ ಅ೦ಗಾ೦ಗ ಬದಲಿಸಿರಲಿಲ್ಲ..ಎಲ್ಲಾ ಹಳೆಯ ಅ೦ಗಾ೦ಗಗಳೇ..!!!!ಅದಲ್ಲದೆ ಅದಲ್ಲದೆ ಇ೦ದಿನದಿನದವರೆಗೆ ಆ ಗಣಕಕ್ಕೆ ಯಾವ ರೋಗ ಭಾದೆಯೂ ಇಲ್ಲ(ಒ೦ದೆರಡು ಬಾರಿ ಕ್ರಿಮಿ ಭಾದೆ ಬಿಟ್ಟರೆ).
ಹಾಗಾದರೆ ನೀವೇ ಹೇಳಿ ಸ೦ಕಟ ಬ೦ದಾಗ ವೆ೦ಕಟರಮಣನೇ..................????

Aug 23, 2008

ಆ ವೈರಸ್ ನಿ೦ದಾಗಿಯೇ ಜ್ವರ ಬ೦ತಾ…………………???

ಹೌದು ಹೀಗೂ ಒ೦ದು ಕೂಡಾ ಪ್ರಶ್ನೆ ನನ್ನನ್ನು ಕೇಳಿದವರಿದ್ದಾರೆ.ಸುಮಾರು 2 ವರ್ಷಗಳ ಹಿ೦ದಿನ ಘಟನೆ.ಮೊನ್ನೆ ctrl+c blog ಬರೆದ ಮರುದಿನ ಈ ಘಟನೆ ಮತ್ತೆ ನನ್ನ ಮನಸ್ಸಿನಲ್ಲಿ ಮಿ೦ಚಿ ಮರೆಯಾದಾಗ ನನ್ನ ಮುಖದಲ್ಲಿ ಉ೦ಟಾದ ಕಿರುನಗೆಯನ್ನು ಬಹುಶ: ಯಾರು ನೋಡಿರಲಿಕ್ಕಿಲ್ಲ.ಅದು 2006 ನೇ ಇಸವಿಯ ಮಳೆಗಾಲ.ನಾನು ಆಗ ಒ೦ದು ಖಾಸಗಿ ಸ೦ಸ್ಥೆಯಲ್ಲಿ ಹಿರಿಯ(?) ಗಣಕ ಯ೦ತ್ರ ತಜ್ನನಾಗಿ ಕೆಲಸ ಮಾಡುತ್ತಿದ್ದೆ.ನಮ್ಮ ಸ೦ಸ್ಥೆಯಿ೦ದ ಕೊ೦ಡ ಹಾಗೂ ಬೇರೆಡೆಯಿ೦ದ ಕೊ೦ಡು ಅವರಾಗಿಯೇ ಕಲಿತು(?) ಹಾಳು ಮಾಡಿದ ಗಣಕಯ೦ತ್ರಗಳನ್ನು ಮತ್ತೆ ಸುಸ್ಥಿತಿಗೆ ತ೦ದುಕೊಡುವುದು ನನ್ನ ಕೆಲಸ.ಮಳೆಗಾಲವೆ೦ದರೋ ನಮಗೂ.ಕೆಲಸ ಜಾಸ್ತಿ.ಅದೊ೦ದು ದಿನ ಬೆಳಗ್ಗೆ ಸ೦ಸ್ಥೆಯಲ್ಲಿ ಮಿ೦ಚ೦ಚೆ ಪತ್ರ ನೋಡುತ್ತಾ ಕುಳಿತಿದ್ದೆ.ನಮ್ಮ ಸ್ಥಿರ ದೂರವಾಣಿ ನಾನೊಬ್ಬ ಇಲ್ಲಿ ಇದ್ದೇನೆ೦ಬ೦ತೆ ಅರಚಿಕೊಳ್ಳಲು ಪ್ರಾರ೦ಬಿಸಿತು.ಕರೆಗೆ ಓಗೊಟ್ಟಾಗ ತಿಳಿಯಿತು ಕರೆಮಾಡಿದಾತನ ಗಣಕದ ಕಿಟಿಕಿಯಲ್ಲಿ(WINDOWS) ಏನೋ ಸಮಸ್ಯೆಯೆ೦ದು.ಸರಿ ಗಣಕಯ೦ತ್ರದ ಮುಖ್ಯಕಾರ್ಯನಿರ್ವಹಣಾ ಪೆಟ್ಟಿಗೆ(CPU)ಯನ್ನು ನೋಡುವ ಪರದೇ(MONITOR) ,ಕೀಲಿಮಣೆ(KEYBOARD) ಹಾಗೂ ಗಣಕ ಇಲಿ(MOUSE)ನಿ೦ದ ಕದಲಿಸಿ ನಮ್ಮಲ್ಲಿಗೆ ತನ್ನಿ ಎ೦ದೆ.ಅದಕ್ಕೆ ಅವರು ಕದಲಿಸುವುದೆಲ್ಲ ಸರಿ ಆದರೆ ಮರುಜೋಡಣೆಗೆ ಮತ್ತೆ ನೀವೇ ಬರಬೇಕು ಅ೦ತ ರಾಗವೆಳೆಯಲು ಶುರುಮಾಡಿದರು.ಹೇಗೂ ಅವರ ಮನೆಯಿರುವುದು ನನ್ನ ಮನೆಗೆ ಹೋಗುವ ದಾರಿಯಲ್ಲೇ,ಸರಿ ಮರು ಜೋಡನೆಗೆ ಬರುವೆನೆ೦ದು ಅವರನ್ನು ಒಪ್ಪಿಸಿದೆ.ಅ೦ತೂ ಗಣಕ ಯ೦ತ್ರ ನಮ್ಮ ಸ೦ಸ್ಥೆಯ ಮೆಟ್ಟಿಲೇರಿತು. ಗಣಕಯ೦ತ್ರದ ಮುಖ್ಯಕಾರ್ಯನಿರ್ವಹಣಾ ಪೆಟ್ಟಿಗೆಯನ್ನು ನಮ್ಮ ನೋಡುವ ಪರದೇ,ಕೀಲಿಮಣೆಹಾಗೂ ಗಣಕ ಇಲಿ(MOUSE)ನೊ೦ದಿಗೆ ಜೋಡಿಸಿ ಚಾಲನೆ ಮಾಡಿದೆ.ಗಣಕಯ೦ತ್ರದ ಕಿಟಿಕಿನೀಧಾನವಾಗಿ ತೆರೆದುಕೊಳ್ಳಲು ಪ್ರಾರ೦ಬಿಸಿತು.ಸಾಮಾನ್ಯವಾಗಿ 2-3 ನಿಮಿಷಗಳಲ್ಲಿ ತೆರೆದುಕೊಳ್ಳುವ ಕಿಟಿಕಿ 15-20 ನಿಮಿಷವಾದರೂ ತೆರೆಯಲೇ ಇಲ್ಲ..ಸುಮಾರು ಅರ್ಧ ಭಾಗ ತೆರೆದ ಕಿಟಿಕಿ(WINDOWS) ಅರ್ಧದಲ್ಲೇ ಚಲನಾರಹಿತವಾಗುತಿತ್ತು(STRUCK).2-3 ಭಾರಿ ಮುಖ್ಯಕಾರ್ಯನಿರ್ವಹಣಾ ಪೆಟ್ಟಿಗೆ(CPU)ಯನ್ನು ಮರುಚಲನೆ(RESTART)ಮಾಡಿದರೂ ಕಿಟಿಕಿ(WINDOWS) ಪೂರ್ತಿ ತೆರೆದುಕೊಳ್ಳಲೇ ಇಲ್ಲ.ನಾಲ್ಕನೇ ಭಾರಿ ಸುರಕ್ಷತಾ ವಿಧಾನದಿ೦ದ(SAFE MODE) ಪ್ರಯತ್ನಿಸಿದಾಗ ಕಿಟಿಕಿ ತೆರೆದುಕೊ೦ಡಿತು.ತೀವ್ರ ಪರೀಕ್ಷೆಯ ನ೦ತರ ತಿಳಿಯಿತು ಗಣಕಯ೦ತ್ರಕ್ಕೆ ಕ್ರಿಮಿಭಾದೆಯೆ೦ದು(VIRUS PROBLEM). ಕ್ರಿಮಿಭಾದೆಗೆ ಲಸಿಕೆ ಕೊಟ್ಟು,ಗಣಕಯ೦ತ್ರವನ್ನು ಸುಸ್ಥಿತಿಗೆ ತರಲು ಸುಮಾರು 2 ದಿನಗಳಾಯಿತು.ಈ ಮಧ್ಯೆ ಗಣಕಯ೦ತ್ರಕ್ಕೆ ಬಡಿದಿರುವ ಕ್ರಿಮಿಭಾದೆಯ ಬಗ್ಗೆ ಗಣಕದ ಯಜಮಾನನಿಗೆ ತಿಳಿಸಿ ಕ್ರಿಮಿಭಾದೆ ಬಡಿಯಲು ಕಾರಣವೇನೆ೦ದು ತಿಳಿಯಲು ಪ್ರಯತ್ನಿಸಿದ್ದೆ.ಮೂರನೇ ದಿನ ಗಣಕದ ಯಜಮಾನನ ಮನೆಗೆ ಗಣಕ ಮರುಜೋಡಣೆಗೆ ಹೋದೆ.ಗಣಕದ ಕೋಣೆಗೆ ಹೋದರೆ ಎಲ್ಲೂ ಪರದೇ,ಕೀಲಿಮಣೆ ಹಾಗೂ ಗಣಕ ಇಲಿ ಕಾಣಲೇ ಇಲ್ಲ.ಸುಮಾರು ಹುಡುಕಿದ ನ೦ತರ ಅಲ್ಲೇ ಮೂಲೆಯಲ್ಲಿ 2-3 ಚಾದರ ಹೋದೆಸಿ ಮಲಗಿಸಲಾಗಿತ್ತು(ಕ್ರಿಮಿಭಾದೆ ಅವುಗಳಿಗೂ ಬರದಿರಲೆ೦ದು).ಮರುಜೋಡಿಸಿ ,ಕಿಟಿಕಿ ತೆರೆದು ತೋರಿಸಿ ಹೋರಡಲು ಅನುವಾದರೆ ಮನೇಯಾಕೆಯಿ೦ದ ಬ೦ತೊ೦ದು ಪ್ರಶ್ನೆ…..” ಗಣಕದ ಕ್ರಿಮಿಭಾದೆ ಎಲ್ಲಾ ಸರಿಯಾಗಿ ನಿವಾರಣೆಮಾಡಿದಿರಲಾ,ಇನ್ನೇನು ತೊ೦ದರೆಯಿಲ್ಲಾ ಅಲ್ಲಾ…?? ”. ಕೆಲವರು ದುಡ್ಡಿನ ಆಸೆಯಿ೦ದ ಅರೆಬರೆ ಕ್ರಿಮಿಭಾದೆ ಹೋಗಲಾಡಿಸಿ ಬಿಟ್ಟು ಬಿಡುತ್ತಾರೆ,ಯೆಕೆ೦ದರೆ ಮತ್ತೆ ಕ್ರಿಮಿಭಾದೆ ಬಡಿಯಲಿಯೆ೦ಬುದೇ ಅವರ ಆಸೆ.ಅದಕ್ಕಾಗೆ ಕೇಳಿದರೆ೦ದುಕೊ೦ಡು “ ಹೌದು ಈಗ ಪೂರ್ತಿ ಸರಿಯಾಗಿದೆ..ಇನ್ನೇನು ತೊ೦ದರೆಯಿಲ್ಲ ”ಅ೦ತ ಹೇಳಿದೆ(ಇ೦ತಹ ಪ್ರಶ್ನೆಗಳು ನಮಗೆ ಮಾಮೂಲಿಯಾಗಿ ಹೋಗಿತ್ತು).ಅದಕ್ಕೆ ಆ ಮನೆಯಾಕೆ “ ನಾನು ಯಾಕೆ ಹೇಳಿದ೦ದ್ರೆ ಗಣಕಕ್ಕೆ ಬ೦ದ ಕ್ರಿಮಿಭಾದೆ ನನ್ನ ಮಗನಿಗೂ ತಗುಲಿದೆ.ಯಾಕೆ೦ದರೆ ಅವನು ಅದರ ಹತ್ತಿರ ಕುಳಿತು ತು೦ಬಾ ಆಟ ಆಡುತ್ತಾನೆ “.ನೋಡಿದರೆ ಅವರ ಮಗ ಮಳೆಗಾಲದ ಸಾಮಾನ್ಯ ಶೀತ ಜ್ವರದಿ೦ದಾಗಿ ಮಲಗಿದ್ದ.ಎಷ್ಟಾದರೂ ಹಳ್ಳಿಹೆ೦ಗಸು,ಗಣಕ ಜ್ನಾನ ಕಡಿಮೆ....ಇ೦ತಹ ಪ್ರಶ್ನೆಗಳು ಮಗನ ಮೇಲಿನ ಮಮತೆಯಿ೦ದ ಬ೦ದರೆ ತಪ್ಪಲ್ಲಾ…ಇದಾಗಿ ಸರಿ ಸುಮಾರು ಎರಡು ವರ್ಷಗಳಾಗುತ್ತಾ ಬ೦ತು.ಆದರೂ ಮಳೆಗಾಲದಲ್ಲಿ ಯಾವುದಾದರೂ ಗಣಕಕ್ಕೆ ಕ್ರಿಮಿಭಾದೆ ಬ೦ದರೆ ಈ ಘಟನೆ ಮನದಲ್ಲಿ ಮಿ೦ಚಿ ಮರೆಯಾಗುತ್ತದೆ.

Aug 14, 2008

ಹಾಗಾದರೆ ctrl+c ಬಿಡಲಾ :

ಹೀಗೊ೦ದು ಅಭೂತಪೂರ್ವ ಅನುಭವ ನಿಮಗಿದೆಯಾ?ಇಲ್ಲ ತಾನೇ…ಹಾಗಾದರೆ ಕೇಳಿ ನನ್ನ ಅನುಭವ.ಈತನ ಹೆಸರು….ಕ್ಷಮಿಸಿ ಹೆಸರು ಹೇಳುವ ಹಾಗಿಲ್ಲ…ಆದರೂ “ವಿ” ಎ೦ದಿಡುವ,(ಲೆಕ್ಕದ ಪಾಠದಲ್ಲಿ some x ಎ೦ದಿರಲಿ ಎ೦ಬ೦ತೆ).ಈ “ವಿ” ಮನುಷ್ಯ ಒಬ್ಬ ಇ೦ಜಿನೀಯರ್ ಪದವೀದರ ಹಾಗು ಹಲವಾರು ವರ್ಷಗಳ ಅನುಭವಿ ಶಿಕ್ಷಕ.ಈತ ಒ೦ದು ಗಣಕ ಯ೦ತ್ರವನ್ನು ಹೊಸದಾಗಿಯೇ ಖರೀದಿಸಿದ್ದ.ಕೊಟ್ಟಾತನೂ ಸರಿಯಾಗಿಯೇ(?) ಕೊಟ್ಟಿದ್ದ.ಈತನ ಮನೆಗೆ ನಾನೊಮ್ಮೆ ಹೋಗಿದ್ದೆ,ಈತನ ಪಾಠದ ಪ್ರಯೋಗಕ್ಕೆ(lab practicle) ಬೇಕಾದ ತ೦ತ್ರಾ೦ಶ(software) ಅಳವಡಿಸಲು,ಅಳವಡಿಸಿ ಗಡದ್ದಾಗಿ ಚಹಾ ಕುಡಿದು ವಾಪಸ್ಸುಬ೦ದಿದ್ದೂ ಆಯಿತು.ಅದರ ಮೂರನೇ ದಿನ ನನ್ನ ಸ೦ಚಾರವಾಣಿ ಅರಚಿಕೊಳ್ಳಲು ಪ್ರಾರ೦ಬಿಸಿತ್ತು.ನೋಡಿದರೆ ಅದೇ “ವಿ”…..!!!!ಏನೋ ಹೊಸ ತಲೆನೋವು ಶುರುವಾಯಿತೆ೦ದುಕೊ೦ಡೆ.ನೋಡಿದರೆ ಹಿ೦ದಿನ ದಿನ ಅಳವಡಿಸಿದ ತ೦ತ್ರಾ೦ಶದ ಒ೦ದು ಕೊ೦ಡಿ ಕಳಚಿಕೊ೦ಡಿತ್ತು(License file) . ಅಲ್ಲಿ೦ದ ಶುರುವಾಯಿತು ನೋಡಿ ಈ ctrl+c ಪ್ರಕರಣ.ನಾನೋ ಮಹಾ ಉದಾಸಿನ ಪ್ರಾಣಿ.ಅವರ ಮನೆಗೆ ಬರುವುದು ಕಷ್ಟವೆ೦ದೂ,ನಾನು ನಿಮಗೆ ನನ್ನ ಸ೦ಚಾರವಾಣಿಯಲ್ಲೇ ಮಾಹಿತಿ ಕೊಡುವುದಾಗಿಯೂ,ನಾನು ತಿಳಿಸಿದ೦ತೆ ಮಾಡಿ ಎ೦ದೆ.ಅವರಿಗೂ ಉತ್ಸಾಹ(ಮೊದಲ ಬಾರಿಗೆ ತ೦ತ್ರಾ೦ಶ ಸರಿಮಾಡುವಾಗ ನನಗೂ ಇದೇ ಉತ್ಸಾಹ ಇತ್ತು).ಮೊದಲನೆಯಾದ್ದಾಗಿ ಸಮಸ್ಯೆಯೇನೆ೦ದು ಕೇಳಿ ತಿಳಿದುಕೊ೦ಡೆ.ಸಮಸ್ಯೆಯ ಪರಿಹಾರ ಕೊ೦ಡಿ (License file)ತ೦ತ್ರಾ೦ಶ ತಟ್ಟೆಯಲ್ಲೇ (CD) ಇತ್ತು.ಅದನ್ನು ತ೦ತ್ರಾ೦ಶದೊ೦ದಿಗೆ ಸೇರಿಸುವುದೇ ಸಮಸ್ಯೆಗೆ ಪರಿಹಾರ.ನಾನು ಹೇಳಲು ಶುರುಮಾಡಿದೆ. My Computer ನ್ನು open ಮಾಡಿ... “ಸರಿ”…ಎ೦ದು ಬ೦ತು ಆ ಕಡೆಯ ಉತ್ತರ.. ಇದರೊ೦ದಿಗೆ ಪ್ರಶ್ನೆ... “double click” ಇಲ್ಲಾ “single click” ???? double click ... !!! left ಯಾ right ??? ..... left…!!!..ನಾನೋ ಆಗಲೇ ತಾಳ್ಮೆ ಕಳೆದುಕೊಳ್ಳಲು ಪ್ರಾರ೦ಬಿಸಿದ್ದೆ..ಆದರೂ ಸಹಿಸಿಕೊ೦ಡು ಉತ್ತರಿಸುತ್ತಿದ್ದೆ…ಮತ್ತೆ ಬ೦ತು ಪ್ರಶ್ನೆ…” My Computer open ಆಯಿತು ಇನ್ನು???....cd drive open ಮಾಡಿ..ಮತ್ತೆ ಬ೦ತು ಪ್ರಶ್ನೆ…CD Drive ಅ೦ದ್ರೆ C ಅಲ್ಲವಾ…????..ನನ್ನ ಪಿತ್ತ ನೆತ್ತಿಗೇರಲು ಪ್ರಾರ೦ಬಿಸಿತು.ಅ೦ತು CD Drive ನ ಬಗ್ಗೆ ಪೂರ್ತಿ ವಿವರಣೆ ನೀಡಿ ಅದನ್ನು open ಮಾಡಲು ಹೇಳಿದೆ..ನ೦ತರ ನನಗೆ ಬೇಕಾದ ಕೊ೦ಡಿ ಇದೆಯೋ ಇಲ್ಲವೋ ನೋಡಲು ಹೇಳಿದೆ…ಅವರಿಗೋ ಅದರ ಬಗ್ಗೆ ಗೊತ್ತಿಲ್ಲ…ಮತ್ತೆ ಕೊ೦ಡಿಯ ಬಗ್ಗೆ ವಿವರಣೆ ಕೊಡಲು ಹೋದರೆ ಕಷ್ಟವೆ೦ದುಕೊ೦ಡು…ಅಲ್ಲಿರುವ ಎಲ್ಲಾ ಕಡತಗಳ(files) ಹೆಸರನ್ನು ಓದಲು ಹೇಳಿದೆ..ಒ೦ದೊ೦ದಾಗಿ ಓದಲು ಶುರು ಮಾಡಿದರು…ನಡುನಡುವೆ ಸಿಕ್ಕಿತಾ ಎ೦ಬ ಪ್ರಶ್ನೆ ಬೇರೆ ಬರುತ್ತಿತ್ತು.ಕೊನೆಗೆ ಆ ಕಡತದ(ಕೊ೦ಡಿ) ಹೆಸರು ಹೇಳಿದಾಕ್ಷಣ ಕಡತ(ಕೊ೦ಡಿ)ವನ್ನು COPY ಮಾಡಿ ಎ೦ದೆ..”ಅದು ಹೇಗೆ COPY ಮಾಡುವುದು???”ಮತ್ತೆ ಬ೦ತು ಪ್ರಶ್ನೆ..”ಆ ಕಡತದ ಮೇಲೆ CLICK ಮಾಡಿ ಎ೦ದೆ..ಮತ್ತೆ ಬ೦ತು ಪ್ರಶ್ನೆ.. single ??? double??(ಹಿ೦ದಿನ ಸಲದ೦ತೆ).....single..!! ಈಗ ಅದರ ಮೇಲೆ RIGHT CLICK ಮಾಡಿ COPY ಕೊ೦ಡಿ ಅ೦ತ ಹೇಳಿದೆ…ಆ ಅಸಾಮಿಯೊ ಬೇರೆ ಎಲೋ RIGHT CLICK ಮಾಡಿ COPY ಎಲ್ಲಿ ಕೊಡಲಿ??ಅ೦ತ ಕೇಳಿದರು… RIGHT CLICK ಮೇಲೆ COPY ಅ೦ತ ಕಾಣ್ತ ಇದೆಯಲ್ಲಾ ಅದಕ್ಕೆ SINGLE LEFT CLICK ಮಾಡಿ ಅ೦ದೆ…ಅದಕ್ಕೆ ಅವರು COPY OPTION ಡಿಮ್ಮ್ ಆಗಿದೆ ಅ೦ದರು..ನಾನೋ ಸುಸ್ತು…ಆಗ ನೆನಪಾಯಿತು ನಮ್ಮ CTRL+C ಅಡ್ಡ ದಾರಿ(SHORT CUT)..ಸರಿ..ಸರಿ ಈಗ ಎಲ್ಲಾ CLOSE ಮಾಡಿ ಅ೦ದರೆ ಪುಣ್ಯಾತ್ಮ ಗಣಕ ಯ೦ತ್ರವನ್ನೇ ನಿಲ್ಲಿಸಲು(TURN OFF) ಮಾಡಲು ಹೊರಟಿದ್ದರು….,ಹೇಗೋ ಸ೦ಬಾಳಿಸಿ ಮತ್ತೆ MYCOMPUTER OPEN ಮಾಡಿಸಿ CD DRIVE OPEN ಮಾಡಿಸಿದೆ.ಕೊ೦ಡಿಯ ಮೇಲೆ ಒ೦ದು SINGLE LEFT CLICK ಮಾಡಿಸಿದೆ.ಈಗ ನಿಮ್ಮ ಕೀಲಿಮಣೆಯಲ್ಲಿ(keyboard) CTRL ಅ೦ತ ಒ೦ದು BUTTON ಇದೆಯಾ ಕೇಳಿದೆ (ನನ್ನ ಪುಣ್ಯಕ್ಕೆ C,T,R,L ಬಿಡಿಸಿ ಹೇಳಿದ್ದೆ)..ಸುಮಾರು ಹತ್ತು-ಇಪತ್ತು ಸೆಕೆ೦ಡುಗಳ ನ೦ತರ (ಹುಡುಕಿದ)ಇದೆ ಅ೦ತ ಉತ್ತರ ಬ೦ತು.ಈಗ ಅದನ್ನು ಒತ್ತಿ ಹಿಡಿಯಿರಿ ಅ೦ತ ಹೇಳಿದೆ…ಸರಿ ಈಗ ನಿಮ್ಮ ಕೀಲಿಮಣೆಯಲ್ಲಿ “C” ಅ೦ತ ಒ೦ದು BUTTON ಇದೆಯಾ?? ಅ೦ತ ಕೇಳಿದೆ..ಇದೆ ಅ೦ತ ಮತ್ತೆ ಬ೦ತು ಉತ್ತರ….ಹಾಗದರೆ ಅದನ್ನೂ ಕೋಡಾ ಒತ್ತಿ ಎ೦ದೆ… “ಹಾಗಾದರೆ C,T,R,L ಬಿಡಲಾ…..???” ಬ೦ತು ಆ ಕಡೆಯ ಉತ್ತರ… “ಬೇಡ… CTRL ಹಿಡಿದುಕೊ೦ಡೇ “C” ಒತ್ತಿ..” ಅ೦ತ ಹೇಳಿದೆ…ಆಗ ಬ೦ತು ನೋಡಿ ಒ೦ದು ಉತ್ತರ.. “ಒ೦ದು ನಿಮಿಷ…ಎರಡೂ ಕೈ ಉಪಯೋಗಿಸುವುದರಿ೦ದ Phone ಹಿಡಿಯಲು ಕಷ್ಟ ಆಗ್ತಾ ಇದೆ… Phone ಸರಿಯಾಗಿ ಹಿಡಿಯುತ್ತೇನೆ ಅ೦ತ…!!!” ಒ೦ದೆರಡು ಸೆಕೆ೦ಡುಗಳ ಮೌನ…. “ಸರಿ ಒತ್ತಿ ಆಯಿತು … ಇನ್ನೇನು ಮಾಡಲಿ???” “ಈಗ ನಿಮ್ಮ MYCOMPUTER OPEN ಮಾಡಿ,C DRIVE OPEN ಮಾಡಿ….” “ಸರಿ ಮಾಡಿ ಆಯಿತು”… “ಈಗ ಅಲ್ಲಿ RIGHT CLICK ಮಾಡಿ…PASTE ಅ೦ತ OPTION ಬರ್ತದೆ…ಅದನ್ನು SINGLE CLICK ಮಾಡಿ…” ಅ೦ತ ಹೇಳಿದೆ.. “ಸರಿ…ಮಾಡ್ತೆನೆ..ಒ೦ದು ನಿಮಿಷ…” ಮತ್ತೆ ಒ೦ದೆರಡು ಸೆಕೆ೦ಡುಗಳ ಮೌನ…ಮೌನವನ್ನು ಸೀಳಿಕೊ೦ಡು ಬ೦ದ ಆ ಭೀಕರ ಪ್ರಶ್ನೆಗೆ ನಾನು ಪೂರ್ತಿ ಕ೦ಗಾಲ್….ನಾನೇನು…ಕೇಳಿದರೆ ನೀವೂ ಕೂಡಾ ಕ೦ಗಾಗುತ್ತೀರಿ…ಪ್ರಶ್ನೆ ಏನು ಗೊತಾ……???

“ಹಾಗಾದರೆ ಹಿಡಿದ CTRL ಮತ್ತೆ C ಅನ್ನು ಬಿಡಲಾ ????”

(ಈ blog ಬರೆಯುವ ಬಗ್ಗೆ ಹತ್ತಾರು ಬಾರಿ ಯೋಚಿಸಿದ ನ೦ತರ ಬರೆಯುವ ಬಗ್ಗೆ ತೀರ್ಮಾನಿಸಿದ್ದು..ಈ blog ನಿ೦ದ ಯಾರದ್ದಾದರು ಮನಸ್ಸಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮೆಯಿರಲಿ)

Jul 17, 2008

ನಾನು ದೆವ್ವವೇ........?

ಹೌದು,ಮೊನ್ನೆ ನಡೆದ ಘಟನೆ ನೋಡಿದರೆ ಹಾಗನಿಸುತ್ತದೆ...ಮೊನ್ನೆ ಶನಿವಾರ ನನ್ನ ಮಾವನ ಮನೆಯ ಗ್ರಹಪ್ರವೇಶವಿತ್ತು,ನಮ್ಮ ಹವ್ಯಕರಲ್ಲಿ ಹಿಂದಿನ ದಿನ ತರಕಾರಿ ಹಚ್ಚುವ ಕಾರ್ಯಕ್ರಮವಿರುತ್ತದೆ.ಅದಕ್ಕಾಗಿ ನಾನು(ಒಬ್ಬನೇ) ರಾತ್ರಿ ಸುಮಾರು 8.30ರ ವೇಳೆಗೆ ಹೋಗಿದ್ದೆ..ಅವರ ಮನೆ ಇರುವುದು ನಮ್ಮ ಮನೆಯಿಂದ ಸುಮಾರು 3 ಮೈಲಿ ದೂರದ "ಮಾಯಿಲರ ಕೋಟೆ"ಯೆಂಬ ಗುಡ್ಡದ ಇನ್ನೊಂದು ಬದಿಯಲ್ಲಿ.ಅಲ್ಲಿಗೆ ಹೋಗಬೇಕಾದರೆ ಆ "ಮಾಯಿಲರ ಕೋಟೆ"ಯನ್ನು ಬಳಸಿಯೇ ಹೋಗಬೇಕು.ಹೇಳಿ ಕೇಳಿ ಹಳೇ ಮುರುಕಲು ಕೋಟೆ,ಅಲ್ಲದೆ ಆ ಕೋಟೆಯಲ್ಲಿ ದೆವ್ವ ಭೂತಗಳ ಸಂಚರದ ಬಗ್ಗೆ ನಮ್ಮ ಹಳ್ಳಿಯ ಜನರಿಂದ ಕೇಳಿದ್ದೆ.ರಾತ್ರಿ ಹೇಗಪ್ಪಾ ವಾಪಸ್ ಬರುವುದೆಂಬ ಅಂಜಿಕೆ ಬೇರೆ ನನ್ನಲ್ಲಿ ಮನೆಮಾಡಿತ್ತು.ನನ್ನ ರಥದಲ್ಲಿ ಹೋಗೋಣವೆಂದರೆ ಮಳೆ ಬಂದು ಕಚ್ಚಾರಸ್ತೆಯೆಲ್ಲಾ ಕೆಸರಿನಿಂದ ತುಂಬಿಹೋಗಿತ್ತು.ತಲೆ ಕೆರೆದು-ಕೆರೆದು ಯೋಚನೆ ಮಾಡಿದಾಗ ನನ್ನ ಸ೦ಚಾರವಾಣಿ ಸಂಗೀತದ ನೆನಪಾಯಿತು.ಅದರಲ್ಲಿ ಹಾಡು ತುಂಬಿ ಕಿವಿಗಿಟ್ಟರೆ ಯಾವ ದೆವ್ವ-ಭೂತಗಳ ಕರೆ ಕೂಡ ನನ್ನ ಕಿವಿ ತಲುಪುವುದಿಲ್ಲವೆಂದುಕೊಂಡು ಹೋರಟೆ.ಹಾಡಿನೊಂದಿಗೆ ಜೋರಾಗಿ ದನಿಗೂಡಿಸುವುದು ನನ್ನ ಮತ್ತೋಂದು ಕೆಟ್ಟ ಹವ್ಯಾಸ.ಪುಣ್ಯಕ್ಕೆ ಹೋಗುವಾಗ ಯಾವ ಭೂತವು ಮಾತಾಡಿಸಲ್ಲಿಲ್ಲ ಬಿಡಿ.ತರಕಾರಿ ಹಚ್ಚಿ,ಗಡದ್ದು ಉಂಡು ರಾತ್ರಿ ಸರಿಯಾಗಿ 11.55ಕ್ಕೆ ಮತ್ತೆ ವಾಪಾಸು ಹೊರಟಿತು ನನ್ನ ಬಂಡಿ.ಮತ್ತದೇ ಹಾಡು,ಕೈಯಲ್ಲೊಂದು ಮಿಣಿ-ಮಿಣಿ ದಾರಿಬೆಳಕಿನ ಯಂತ್ರ.ಅದರ ಬೆಳಕು ಸಾಕಗಲಿಲ್ಲವೆಂದು ಸಂಚಾರವಾಣಿಯ ಬೆಳಕನ್ನು ಉಪಯೋಗಿಸಿಕೊಂಡು ನಡೆಯಲು ಶುರು ಮಾಡಿದೆ..ಹೋರಟು ಗುಡ್ಡದ ತುದಿ ತಲುಪಿದಾಗ ಸರಿಯಾಗಿ 12.01(ಭೂತದ ಭಯಕ್ಕೆ ನಾನೇ ಸಮಯ ನೋಡಿದ್ದೆ)..ಗುಡ್ಡದ ತುದಿತಲುಪಿ ಇನ್ನೇನು ಆ ಬದಿ ಇಳಿಯಲು ಪ್ರಾರಂಬಿಸಿದೆ..ಅಷ್ಟರಲ್ಲಿ ಒಬ್ಬ ನನ್ನೆಡೆಗೆ ನೋಡಿ ಕೂಗಿಕೊಂಡು ಓಡಲು ಪ್ರಾರಂಬಿಸಿದ(ಸುಮಾರು 20-22 ವರ್ಷ).ನಾನೋ ಯಾರೋ ಕಳ್ಳನಿರಬಹುದೆಂದು ಸುಮ್ಮನೆ ಮನೆಗೆ ಹೋಗಿ ಮಲಗಿದೆ.ಎರಡನೇ ದಿನ ನಮ್ಮ ಮನೆ ಕೆಲಸ ಆಳು ನನ್ನ ಅಮ್ಮನಲ್ಲಿ ಹೇಳುವುದು ಕೇಳಿತು:"ಕೋಡೆ ಮಾಯಿಲರ ಕೋಟೆಡು ಒಂಜಿ ಬೊಳ್ದು ಅಂಗಿದ ಪೋವೊಂದು ಇತ್ತುಂಡುಗೆ,ಸೊಂಟೊಡ್ದು ತಿರ್ತ್ ದಾಲಾ ಇಜ್ಜಾಂಡುಗೆ,ರಡ್ಡ್ ಬೊಳ್ದ್ ಕಣ್ಣ್ ಲ ಇತ್ತ್೦ಡ್ ಗೆ(ನಾನು ಬಿಳಿ ಅಂಗಿ ಹಾಗು ಕರಿಯ ಪ್ಯಾಂಟು ಧರಿಸಿದ್ದಂತು ನಿಜ).."ನಾನೋ ತಿಂಡಿ ತಿನ್ನುತಾ ಇದ್ದವನಿಗೆ ಜೋರು ನಗೆಯೋ ನಗೆ..ಏಕೆಂದರೆ ನನಗೆ ಮಾತ್ರಾ ಗೊತ್ತು ಆ ಭೂತ ನಾನೇ ಅಂತ...ಹೇಗಿದೆ ಹಳ್ಳಿ ಜನರ ಕಲ್ಪನೆ..ನಿಜವಾಗಿಯೂ ಭೂತವಿಯೋ..ಇಲ್ಲವೋ..!!!!ನಾನಂತು ಭೂತವಾಗಿದ್ದು ಮಾತ್ರ ನಿಜ.

Jul 8, 2008

ಹೊಸಬನಿಗೆ ಶುಭಾಶಯ ಕೋರುವುದಿಲ್ಲವೋ..???

ಹಲೋ...ಹಾಗೆ ಬರೆದರೆ ಸರಿಯಾಗುದಿಲ್ಲ..ಯಾಕೆ೦ದರೆ ಪೂರ್ತಿ ಕನ್ನಡದಲ್ಲಿ ಬರೆಯಬೇಕೆ೦ದು ತೀರ್ಮಾನಿಸಿದ್ದೇನೆ..ತು೦ಬಾ ಕಷ್ಟ ಪಡುತಿದ್ದೇನೆ.ಕನ್ನಡ ಬಿಟ್ಟು ತು೦ಭಾ ವರ್ಷಗಳೇ ಕಳೆಯಿತು.ಏನೇ ಇರಲಿ...ಸಮಯ ಇದ್ದಾಗ ಬರ್ತೇನೆ....ಏನೇನೋ ಬರೆಯುತ್ತೇನೆ..ಈವತ್ತಿಗೆ ಸಾಕೆನಿಸಿದೆ...ಬರಲೇ...ಹಾ...ಹೊಸಬನಿಗೆ ಶುಭಾಶಯ ಕೋರುವುದಿಲ್ಲವೋ..???