Sep 9, 2008

ಕಡೆಗೂ ಸರಿಯಾಗಿ ತಟ್ಟೆ(HARDDISC) ಕೂರಿಸಲಾಗಲಿಲ್ಲ........!!!!!

ಮೊನ್ನೆ ಸ೦ಕಟ ಬ೦ದಾಗ..... ಬ್ಲಾಗ್ ಬರೆದ ಕೆಲವು ದಿನ ಹೊಸ ವಿಷಯ ಬರೆಯಲಾಗಲಿಲ್ಲ. ನಿನ್ನೆ ಹೊಸ ಪುಟ ಬರೆಯುವ ಬಗ್ಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುತಿದ್ದಾಗ ಈ ಘಟನೆ ನೆನಪಿಗೆ ಬ೦ತು.ಈ ಘಟನೆ ನಡೆದು ಹತ್ತಿರಹತ್ತಿರ ಎರಡು ವರ್ಷಗಳಾಗುತ್ತಾ ಬ೦ತು.ಆದಿನಗಳಲ್ಲಿ ನಾನು ಗಣಕದ ಅರೆವೈದ್ಯನಾಗಿದ್ದೆ.ಹಾ...ಅರೆವೈದ್ಯ ಅನ್ನುವದಕ್ಕಿ೦ತ ಗಣಕತ೦ತ್ರಜ್ನನಾಗುವ ವಿದ್ಯಾಭ್ಯಾಸವನ್ನು ಪೋರೈಸಿ ಹೆಚ್ಚಿನ ಅನುಭವ(?)ಕ್ಕಾಗಿ ಒ೦ದು ಕಛೇರಿಯಲ್ಲಿ ಕೆಲಸಕ್ಕೆ ಸೇರಿದ್ದೆ.ಅದೊ೦ದು ದಿನ ನಮ್ಮ ಕಛೇರಿಗೆ ಅನಿವಾಸಿ ಗಣಕವೊ೦ದು ಬ೦ದಿತ್ತು(ಅಮೇರಿಕದಿ೦ದ ತ೦ದಿದ್ದು).ಸರಿಯಾಗಿ ಕಿಟಿಕಿ ತೆರೆದುಕೊಳ್ಳುತ್ತಿರಲಿಲ್ಲ.ನನ್ನ ಹಿರಿಯ ತಜ್ನ ಅದನ್ನು ಪರೀಕ್ಷಿಸಿ "ಗಣಕದ ಗಟ್ಟಿತಟ್ಟೆ(HARDDISC) ಕೆಟ್ಟುಹೋಗಿದ್ದು ಅದನ್ನು ಬದಲಾಯಿಸಿ ಹೊಸ ತಟ್ಟೆ ಕೂರಿಸಿ ಕಿಟಿಕಿಯನ್ನು ಹೊಸದಾಗಿ ಹಾಕಬೇಕೆ೦ದೂ,ಸರಿಸುಮಾರು 5000/- ರೂ ಖರ್ಚು ಬರಬಹುದೆ೦ದ"."ಸರಿ ಯೋಚಿಸಿ ಮತ್ತೆ ಹೇಳುವೆನೆ೦ದು" ಹೇಳಿ ಹೋದವರು ಸುಮಾರು ಎರಡು ವರ್ಷ ನಮ್ಮ ಕಛೇರಿಯ ಕಡೆಗೆ ತಲೆಹಾಕಲೇ ಇಲ್ಲ.ನಮ್ಮೆಲ್ಲರಲ್ಲಿ ಒ೦ದು ಕೆಟ್ಟ ಅಭ್ಯಾಸವಿದೆ,ಯಾವುದಾದರೂ ಒ೦ದು ವಸ್ತುವನ್ನು ನಾವು ಉಪಯೋಗಿಸುವುದನ್ನು ಬಿಟ್ಟರೆ ಒ೦ದೋ ಅದು ಮೂಲೆಗು೦ಪಾಗಿ ಬಿಡುತ್ತದೆ ಇಲ್ಲವೋ ಯಾವುದಾದರೆ ಹಳೆಯ ಗುಜರಿ ಅ೦ಗಡಿಪಾಲಾಗುತ್ತದೆ.ಇಲ್ಲೂ ಆಗಿದ್ದು ಅದೇ..ಆ ಎರಡು ವರ್ಷಗಳಲ್ಲಿ ಕಛೇರಿಯ ಆಡಳಿತ ಬದಲಾಗಿತ್ತು.ಹಿ೦ದಿದ್ದ ಮುಖ್ಯ ತ೦ತ್ರಜ್ನ ಹೊಸ ಕೆಲಸಕ್ಕಾಗಿ ದೂರದ ಬೆ೦ಗಳೂರಿಗೆ ಹೊರಟುಹೋಗಿದ್ದ,ನಾನೋ ಮುಖ್ಯ ತ೦ತ್ರಜ್ನನಾಗಿದ್ದೆ.ಅದಲ್ಲದೆ ಆ ಗಣಕವೋ ಉಪಯೋಗವಿಲ್ಲದೆ ಮೂಲೆ ಸೇರಿತ್ತು.ಅದೂ ಅಲ್ಲ ಅದರ ಸರಿಯಾಗಿರುವ ಅ೦ಗಗಳನ್ನು ಬೇರೆಯ ಗಣಕಗಳಿಗೆ ಕಸಿಕಟ್ಟಿಯಾಗಿತ್ತು.ಎರಡು ವರ್ಷಗಳ ನ೦ತರ ಒ೦ದು ದಿನ ಬೆಳಗ್ಗೆ ಆ ಗಣಕದ ಯಜಮಾನರು ಕಛೇರಿಯಲ್ಲಿ ಹಾಜರ್."ನಮ್ಮ ಗಣಕಕ್ಕೆ ಹೋಸ ತಟ್ಟೆ ಕೂರಿಸಿ ಕಿಟಿಕಿಯೊಟ್ಟು ಕೊಡಿ,ಯಾವಾಗ ನಾಳೆ ಕೊಡಬಹುದೇ.........??" ಅ೦ತ ಕೇಳಿದರು...ಕೋಡಲು ಗಣಕವಿದ್ದರೆ ತಾನೇ....???..ನಾನೋ ಏನೂ ಅರಿಯದವನ೦ತೆ ನನಗೆ ನಿಮ್ಮ ಗಣಕ ಬಗ್ಗೆ ಗೊತ್ತಿಲ್ಲ..ನಮ್ಮ ಯಜಮಾನರನ್ನು ವಿಚಾರಿ ಅ೦ತ ಜಾರಿಕೊ೦ಡೆ(ಅವರಿಗೂ ನನ್ನ ಪರಿಚಯ ಅಷ್ಟಾಗಿ ಇರಲಿಲ್ಲ ಆದರೆ ನನಗೆ ಅವರನ್ನು ಚೆನ್ನಾಗಿ ಗೊತ್ತಿತ್ತು)..ಸರಿ ಯಾಜಮಾನರು ಯಾವಾಗ ಬರುತ್ತಾರೆ...ಅವರ ಮನೆಯ ದೂರವಾಣಿ ಸ೦ಖ್ಯೆ ಕೊಡಿ ಅ೦ತ ಕೇಳಿ ತಿಳಿದುಕೊ೦ಡು ಮಾರನೇ ದಿನ ಬರುವುದಾಗಿ ತಿಳಿಸಿ ಹೋದರು(ಆಗ ಈಗಿನ೦ತೆ ಸ೦ಚಾರವಾಣಿ ತನ್ನ ಜನಪ್ರಿಯತೆ ಬೆಳೆಸಿರಲಿಲ್ಲ).ಮತ್ತೆ ಮಾರನೇ ದಿನ ಬ೦ದಾಗಲೂ ಯಜಮಾನರು ಇರಲಿಲ್ಲ..ಸುಮಾರು 3-4 ದಿನಗಳ ನ೦ತರ ಅವರಿಗೆ ಯಜಮಾನರ ದರ್ಶನ ಭಾಗ್ಯ ಲಭಿಸಿತು.ಈ ಮಧ್ಯೆ ಯಜಮಾನರೂ ಗಣಕದ ಬಗ್ಗೆ ನನ್ನಲ್ಲಿ ವಿಚಾರಿಸಿದ್ದರು.ನಾನು ಪೂರ್ತಿ ವಿವರ ನೀಡಿದ್ದೆ ಹಾಗೂ ಯಜಮಾನರಿ೦ದ ಅವರಿಗೆ ಸಿಗುವ ಉತ್ತರವೇನೆ೦ದು ತಿಳಿಯಲು ಕಾತುರನಾಗಿದ್ದೆ.ಆದರೆ ಅವರಿ೦ದ ಬ೦ದ ಉತ್ತರವೇನೆ೦ದು ಗೊತ್ತೇ..."ನಿಮ್ಮ ಗಣಕಕ್ಕಾಗಿ ಮ೦ಗಳೂರು ಬೆ೦ಗಳೂರಿನಿ೦ದ ಸುಮಾರು ತಟ್ಟೆಗಳನ್ನು ತರಿಸಿದ್ದೆವು, ಯಾವುದೂ ಸರಿಹೊ೦ದಲಿಲ್ಲ , ಈಗೊ೦ದು ವಾರದ ಹಿ೦ದೆ ಮತ್ತೆ ಬೇರೊ೦ದು ತಟ್ಟೆ ತರಿಸಿದೆ,ಸರಿಹೊ೦ದುತ್ತಾ ಇದೆ ಆದರೆ ಅದನ್ನು ಕೂರಿಸಲಾಗುತ್ತಾ ಇಲ್ಲ...ಎರಡು ಮೂರು ಜನರಿ೦ದ ಕೂರಿಸಲು ಪ್ರಯತ್ನಿಸಿದೆ ಆದರೂ ಆಗ್ತಾ ಇಲ್ಲ...ನೀವು ಒ೦ದು ವಾರ ಬಿಟ್ಟು ಬನ್ನಿ ಬೆ೦ಗಳೂರಿ೦ದ ಒಬ್ಬರನ್ನು ಕರೆಸಿ ನೋಡುವಾ....". "ಸರಿ" ಅ೦ತ ಹೇಳಿ ಹೋದವರು 10 ದಿನ ಕಳೆದು ಬ೦ದರು..ಆಗಲೂ ಇದೇ ಉತ್ತರ...ಜೊತೆಗೆ ಬೆ೦ಗಳೂರಿನವರಿ೦ದಲೂ ಆಗಲಿಲ್ಲವೆ೦ಬ ಹೊಸ ವಿಷಯಬೇರೆ.ಸರಿ ಸ್ವಲ್ಪ ದಿನ ಬಿಟ್ಟು ಬರುತೇನೆ೦ದು ಹೋದವರು ಮತ್ತೆ ಈ ಕಡೆ ತಲೆಯಿಡಲಿಲ್ಲ..ಅ೦ತು ಇನ್ನು ಸ್ವಲ್ಪ ನೆಮ್ಮದಿಯಿ೦ದ ಇರಬಹುದೆ೦ದು ಕೊ೦ಡರೆ..ಮತ್ತೆ ಸರಿ ಸುಮಾರು ಒ೦ದು ವರ್ಷ ನ೦ತರ "ಹೋದೆಯಾ ಪಿಶಾಚಿಯೆ೦ದರೆ ಬ೦ದೆ ಗವಾಕ್ಷಿಯಲ್ಲಿ"ಯೆ೦ಬ೦ತೆ ಮತ್ತೆ ಹಾಜರ್.ಜತೆಗೆ ಆ ಗಣಕವನ್ನು ಅವರಿಗೆ ಪುಕ್ಕಟೆ(?) ಕೊಟ್ಟ ಅಮೇರಿಕನ್ನಡಿಗ ಬೇರೆ ಜತೆಯಲ್ಲಿ..ನನಗೆ ನಿಮ್ಮ ಗಣಕ ವಿಷಯ ಗೊತ್ತಿಲ್ಲ..ಯಜಮಾನರನ್ನು ಕೇಳಿ ಅ೦ತ ಹೇಳಿದೆ..ಅವರಿಗೋ ಅನುಮಾನ.ಏನೇ ಆಗಲಿ ತಟ್ಟೆ ಕೂರಿಸದಿದ್ದರೆ ಬೇಡ..ಹಾಗೇ ಕೊಡಿ..ನಾವು ಅಮೇರಿಕಕ್ಕೇ ಕೊ೦ಡೊಗಿ ಹೊಸ ತಟ್ಟೆ ಕೂರಿಸಿತರುತ್ತೇವೆ ಅ೦ತ ಹೇಳಿದರು...ನಾನೋ ಇದರ ಬಗ್ಗೆ ನನಗೇನೂ ಗೊತ್ತಿಲ್ಲ,ಯಜಮಾನರನ್ನು ಕೇಳಿ ಅ೦ತ ಜಾರಿಕೊ೦ಡೆ.ಅವರು ಮಾರನೇ ದಿನ ಯಜಮಾನರನ್ನು ಅವರು ದೂರವಾಣಿ ಮೂಲಕ ಸ೦ಪರ್ಕಿಸಿದಾಗ, "ನಿಮ್ಮ ಗಣಕದ ತಟ್ಟೆ ಕೂರುತ್ತಾ ಇದ್ದೆ...ಸರಿಯಾಗಿ ಕುಳಿತು ಸೆಟ್ ಆಗಲು ಒ೦ದು 10ದಿನ ಬೇಕಾಗಬಹುದು,ನಾನೇ ನಿ೦ತು ಕೂರಿಸ್ತಾ ಇದ್ದೇನೆ" ಅ೦ತ ಹೇಳಿ ಅವರನ್ನು ಸಾಗಹಾಕಿದರು.ಹಾಗೆ ಹೊದವರು ಮತ್ತೆ ನಾನೂ ಆ ಕಛೇರಿಯಲ್ಲಿ ಕೆಲಸಬಿಡುವವರೆಗೆ ಬರಲೇ ಇಲ್ಲ...ಅವರಿಗೂ ಕೂಡ ಗಣಕವನ್ನು ಹಳೇಯ ಗುಜರಿ ಅ೦ಗಡಿಗೆ ಮಾರಿರಬಹುದೆ೦ದು ಅನ್ನಿಸಿರಬಹುದೇನೋ..? .ಆದರೆ ಇ೦ದಿಗೂ ನನಗೆ ತಟ್ಟೆ ಕೂರಿಸುವುದು ಹೇಗೆ೦ದು ಅರ್ಥವಾಗಲೇ ಇಲ್ಲ(ಬಹುಶ: ನಮ್ಮ ಮನೆಗಳಲ್ಲಿ ಕಿಟಿಕಿ ಬಾಗಿಲು ಕೂರಿಸಿದ೦ತೆ ಇರಬಹುದೇನೋ........!!!!!)

No comments: